ಹಸಿರು ಟವಲ್ ಹಾಕ್ಕೊಂಡು ಬಿಎಸ್‍ವೈರಿಂದ ಗೋಸುಂಬೆ ರಾಜಕಾರಣ: ಉಗ್ರಪ್ಪ ವಾಗ್ದಾಳಿ

Public TV
2 Min Read

– ಬಿಎಸ್‍ವೈಗೆ ತಾಕತ್ ಇದ್ರೆ ಸರ್ಕಾರ ವಿಸರ್ಜಿಸಿ ಜನಾದೇಶಕ್ಕೆ ಬರಲಿ

ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಟವಲ್ ಹಾಕಿಕೊಂಡು ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಂಸದರು, ಬಿ.ಎಸ್.ಯಡಿಯೂರಪ್ಪನವರು ಮೊದಲ ಬಾರಿ ಸಿಎಂ ಆಗಿದ್ದಾಗ ರೈತರ ಸಾವಿಗೆ ಕಾರಣವಾಗಿದ್ದರು. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತ ಸಿದ್ದಲಿಂಗಪ್ಪ ಚೂರಿ ಸಾವಿಗೆ ಕಾರಣವಾಗಿದ್ದರು ಎಂದು ಆರೋಪಿಸಿದರು.

ರಾಜ್ಯದಲ್ಲಿ ಪ್ರವಾಹ ಎದುರಾದಾಗ ಗದಗನಲ್ಲಿ ಲಾಠಿ ಚಾರ್ಜ್ ಮಾಡಿಸಿದ್ದರು. ಬೆಳಗಾವಿಯಲ್ಲಿ ಪರಿಹಾರ ಕೇಳಿದ್ದಕ್ಕೆ ಅರೆಸ್ಟ್ ಮಾಡಿಸಿದ್ದರು. ಸಿಎಂ ಯಡಿಯೂರಪ್ಪ ಅವರು ಗೋಸುಂಬೆ ರಾಜಕಾರಣಿಯಾಗಿದ್ದಾರೆ. ಜನರ ಜೊತೆಗೆ ಚೆಲ್ಲಾಟ ಆಡುವುದನ್ನು ಬಿಟ್ಟು, ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸ ಮಾಡಲಿ. ಬರ ಮತ್ತು ಪ್ರವಾಹದಿಂದ ನಷ್ಟ ಅನುಭವಿಸಿದ ರೈತರ ಸಾಲ ಮನ್ನಾ ಮಾಡಲಿ ಎಂದು ಹೇಳಿದರು.

ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ಜನರನ್ನು ಬೇರೆಡೆ ಸೆಳೆದು ಸುಳ್ಳು ಹೇಳುವ ನಾಯಕ. ಅವರು ಸುಳ್ಳಿನ ಕಂತೆಯಲ್ಲಿ ಸರ್ಕಾರ ರಚಿಸಿದ್ದಾರೆ. ಅವರಿಗೆ ತಾಕತ್ ಇದ್ದರೆ ಸರ್ಕಾರ ವಿಸರ್ಜಿಸಿ, ಮತ್ತೆ ಜನಾದೇಶಕ್ಕೆ ಬರಲಿ. ನಾವು ಎಲ್ಲಿ ಇರಬೇಕು ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ ಎಂದು ಸವಾಲು ಹಾಕಿದರು.

ಬಳ್ಳಾರಿ ವಿಭಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಂಸದರು, ಯಾವತ್ತೂ ಇರಲಾರದ ವಿಭಜನೆ ವಿಚಾರ ಈಗ ಅನರ್ಹ ಸಿಂಗ್ ಆನಂದ್ ಸಿಂಗ್ ಅವರಿಗೆ ಬಂದಿದೆ. ಮೂರು ಬಾರಿ ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಏನು ಮಾಡಿದ್ದಾರೆ? ಉಪ ಚುನಾವಣೆಗಾಗಿ ಜನರ ಭಾವನೆಗಳ ಜೊತೆ ಆಟ ಆಡುತ್ತಿದ್ದಾರೆ. ಅವರ ಮನೆ ಪಕ್ಕದ ಜಲಾಶಯ ಹೂಳು ತುಂಬಿದ್ದರೂ ಅದರ ಬಗ್ಗೆ ಯೋಚನೆ ಮಾಡಲಿಲ್ಲ. ಆನಂದ್ ಸಿಂಗ್ ಏನೂ ಮಾಡಿಲ್ಲ, ಎನ್ನುವುದು ಜನರಿಗೆ ಗೊತ್ತಿದೆ. ಅವರ ಸಾಧನೆ ಅಂದರೆ ಮಾಲ್‍ಗಳು ಎಂದು ವಾಗ್ದಾಳಿ ನಡೆಸಿದರು.

ಬಳ್ಳಾರಿ ಹಲವು ತ್ಯಾಗ ಬಲಿದಾನದಿಂದ ರೂಪುಗೊಂಡ ಜಿಲ್ಲೆಯಾಗಿದೆ. 1955 -56ರ ಜನಾಭಿಪ್ರಾಯದ ಮೂಲಕ ರೂಪುಗೊಂಡ ಜಿಲ್ಲೆಯಾಗಿದ್ದು, ತುಂಗಭದ್ರಾ ಜಲಾಶಯ ಹಾಗೂ ಹಂಪಿಯನ್ನು ಬಿಟ್ಟು ಬಳ್ಳಾರಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಾಲ್ಕು ಜನ ರಾಜಕಾರಣಿಗಳಿಂದ ಬಳ್ಳಾರಿ ವಿಭಜನೆ ಆಗಲ್ಲ. ಜನರ ಅಭಿಪ್ರಾಯದಿಂದ ಬಳ್ಳಾರಿ ವಿಭಜನೆ ಆಗಬೇಕು ಎಂದರು.

ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಷಯ ಕೈ ಬಿಡುವ ಸಿಎಂ ನಿರ್ಧಾರಕ್ಕೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ದೇಶದ ಮೊದಲ ಪ್ರಜೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಭಾಷಣ ಮಾಡಿದ್ದರು. ಆ ಭಾಷಣ ಬಿಜೆಪಿಯವರು ಮೊದಲು ಕೇಳಲಿ. ರಾಷ್ಟ್ರಪತಿಗಳು ಬೆಂಗಳೂರಿಗೆ ಬಂದಾಗ ಟಿಪ್ಪು ಸುಲ್ತಾನ್ ದೇಶಪ್ರೇಮಿ ಎಂದು ಹೇಳಿದ್ದರು. ಹಾಗಾದರೆ ಆ ಭಾಷಣ ಸತ್ಯವೋ ಅಥವಾ ಸುಳ್ಳೋ ಎಂದು ಬಿಜೆಪಿ ಮೊದಲು ಸ್ಪಷ್ಟಪಡಿಸಲಿ ಎಂದರು.

ಸಿಎಂ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದಾಗ ಒಂದು ನಿಲುವು, ಇಗೊಂದು ನಿಲುವು. ಏಕೆಂದರೆ ಕೆಜೆಪಿ ಕಟ್ಟಿದಾಗ ಟಿಪ್ಪು ಜಯಂತಿ ಮಾಡುವುದು ನನ್ನ ಗುರಿ ಎಂದಿದ್ದರು. ಈಗ್ಯಾಕೆ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಷಯವನ್ನು ಕೈಬಿಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *