ಬಿಎಸ್‍ವೈಯನ್ನು ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲದ್ದಕ್ಕೆ ಸಿಎಂ ಹುದ್ದೆ – ಎಸ್.ಆರ್.ಪಾಟೀಲ್

Public TV
2 Min Read

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಅಂಕುಶ ಹಾಕುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈಗೆ ತೊಂದರೆ ಕೊಡುತ್ತಿರುವುದು ರಾಜ್ಯದ ದೊಡ್ಡ ಸಂಖ್ಯೆಯ ಲಿಂಗಾಯತ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಈಗಾಗಲೇ ಆಕ್ರೋಶ ಪ್ರಾರಂಭವಾಗಿದೆ. ಇದಕ್ಕೆ ಬಿಜೆಪಿಗೆ ಶಾಸ್ತಿ ಮಾಡುವ ಕಾಲ ಬರುತ್ತಿದೆ. ಬಿಜೆಪಿಯಲ್ಲಿ ಈಗ ಮುಸುಕಿನ ಕಾಳಗ ನಡೆಯುತ್ತಿದೆ. ಬಿಎಸ್‍ವೈ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸಿಎಂ ಮಾಡಿದ್ದಾರೆಯೇ ಹೊರತು ಅವರ ಮೇಲಿನ ನಂಬಿಕೆಯಿಂದಲ್ಲ ಎಂದು ಆರೋಪಿಸಿದರು.

ಬಿಜೆಪಿಯಲ್ಲಿನ ಗುಂಪು ಘರ್ಷಣೆ ಮುಂದೆ ಬಯಲಿಗೆ ಬರಲಿದೆ. ಡಿಸೆಂಬರ್ ಯಾವಾಗ ಮುಗಿಯುತ್ತದೆ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಸರ್ಕಾರದ ಅವಧಿ ದೀರ್ಘ ಇಲ್ಲ ಎಂದು ರಾಜಕೀಯ ಪಂಡಿತರಲ್ಲ, ಜನಸಾಮಾನ್ಯರು ಹೇಳುತ್ತಿದ್ದಾರೆ ಎಂದರು.

ಉಪ ಚುನಾವಣೆ, ಪ್ರಮುಖ ಚುನಾವಣೆ ಸಂದರ್ಭಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಸಾಮೂಹಿಕ ನಾಯಕತ್ವ ಅಗತ್ಯವಿದೆ. ಇದನ್ನು ನಾನು ಪದೇ ಪದೆ ಹೇಳುತ್ತಿದ್ದೇನೆ. ಸಾಮೂಹಿಕ ನಾಯಕತ್ವ ಬೇಡ ಎಂದು ಸಿದ್ದರಾಮಯ್ಯ ಹೇಗೆ ಹೇಳುತ್ತಾರೆ. ಕಾಂಗ್ರೆಸ್‍ನಲ್ಲಿ ವಿವಿಧ ಸಮಾಜದ ಪ್ರಮುಖ ನಾಯಕರಿದ್ದಾರೆ. ನಾವೆಲ್ಲರೂ ಕೂಡಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದರೆ ಜಯ ಕಟ್ಟಿಟ್ಟ ಬುತ್ತಿ. ಸಾಮೂಹಿಕ ನಾಯಕತ್ವ ಇದ್ದರೆ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೇರುವುದು ಶತಃಸಿದ್ಧ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದು ಅವರಿಗೆ ಬಿಟ್ಟಿದ್ದು ಎಂದು ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದರು.

ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಉಮೇಶ್ ಕತ್ತಿ ಹೇಳಿಕೆ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯ ಈಗಾಗಲೇ ಆಗಿದೆ. ನೆರೆ ಹಾವಳಿಯಲ್ಲಿ ಉತ್ತರ ಕರ್ನಾಟಕದ 13 ರಲ್ಲಿ 12 ಜಿಲ್ಲೆ ಹಾನಿಗೀಡಾಗಿವೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ಉತ್ತರಕ್ಕೆ ನ್ಯಾಯ ಕೊಡಿಸಲು ಹೋರಾಟ ಮಾಡುತ್ತೇವೆ. ಪಕ್ಷಾತೀತ ಹೋರಾಟ ಮಾಡಿ, ಸೌಕರ್ಯ ತರುತ್ತೇವೆ. ನಿರ್ಲಕ್ಷಿಸಲಾಗುತ್ತಿದೆ ಎಂಬ ಕಾರಣಕ್ಕೆ ಒಡಕಿನ ಧ್ವನಿ ಬೇಡ. ಅಖಂಡ ಕರ್ನಾಟಕ ಇರಬೇಕು. ಪ್ರತ್ಯೇಕ ರಾಜ್ಯ ಮಾಡಿ ಸುಧಾರಣೆ ಎನ್ನುವುದಕ್ಕಿಂತ ಉತ್ತರದ ಎಲ್ಲ ನಾಯಕರು ಪಕ್ಷಾತೀತವಾಗಿ ಮುಂಚೂಣಿಯಲ್ಲಿ ನಿಂತು ಅಭಿವೃದ್ಧಿ ಮಾಡಿಸಬೇಕು. ಪ್ರತ್ಯೇಕ ರಾಜ್ಯದ ಧ್ವನಿ ಬೇಡ ಎಂದರು.

Share This Article
Leave a Comment

Leave a Reply

Your email address will not be published. Required fields are marked *