ಸಿಂಹಗೆ ಮೋದಿ ದೇವ್ರು ಇರ್ಬೋದು, ಬೇಕಾದ್ರೆ ಪೂಜೆ ಮಾಡ್ಲಿ – ಆದ್ರೆ ಮೊದ್ಲು ಪರಿಹಾರ ಕೊಡ್ಲಿ: ಕಾಂಗ್ರೆಸ್ ಕಿಡಿ

Public TV
2 Min Read

ಬೆಂಗಳೂರು: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಪರಿಹಾರ ಕೊಟ್ಟಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.

ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಸಂಸದರಾಗಿರುವ ಪ್ರತಾಪ್ ಸಿಂಹ ಅವರ ಟಿಪ್ಪಣಿ ಬಹಳ ನೋವು ತರುವಂತದ್ದಾಗಿದೆ. ವೈಚಾರಿಕ ಹಿನ್ನೆಲೆಯಿಂದ ಬಂದ ಸಂಸದರು ಮೋದಿಯನ್ನು ಬೈದರೆ ದೇವರನ್ನು ಬೈದಂಗೆ. ಹೋಲಿಕೆ ಮಾಡುವುದಕ್ಕೆ ಸಮಾನ ಬೇಡವೇ. ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರು ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಹಾನಿಯಾಗಿದ್ರೂ ಅವರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ಈಗ ಅವರ ಆಕ್ರೋಶ ಹೊರಹೊಮ್ಮಿದೆ. ಈಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ: ಪ್ರತಾಪ್ ಸಿಂಹ

ಮಾಜಿ ಡಿಸಿಎಂ ಪರಮೇಶ್ವರ್, ಪ್ರತಾಪ್ ಸಿಂಹಗೆ ಮೋದಿಯವರು ದೇವರು ಆಗಿರಬಹುದು. ಅವರ ಭಾವನೆಗೆ ನಾನು ತಪ್ಪು ಎಂದು ಹೇಳುವುದಿಲ್ಲ. ಏಕೆಂದರೆ ಅವರಿಗೆ ಮೋದಿಯವರೇ ದೇವರು. ಆದರೆ ಕರ್ನಾಟಕದ ಜನತೆಗೆ ಆಗಿರುವಂತಹ ಅನ್ಯಾಯದ ಬಗ್ಗೆ ಮಾತನಾಡಬೇಕು. ನಾವು ನೆರೆಗೆ ಪರಿಹಾರ ಕೊಡಿ ಎಂದು ಕೇಳುತ್ತಿದ್ದೆವೆ ಹೊರತು ಬೇರೆನೂ ನಾವು ಕೇಳುತ್ತಿಲ್ಲ. ಲಕ್ಷಾಂತರ ಜನ ಮನೆ, ದನ, ಕರುಗಳನ್ನು ಕಳೆದುಕೊಂಡಿದ್ದಾರೆ. ನೂರಾರು ಮಂದಿ ಮೃತಪಟ್ಟಿದ್ದಾರೆ. ನಿಮಗೆ ಕರ್ನಾಟಕದ ಮೇಲೆ ಅಷ್ಟು ಕೂಡ ಕನಿಕರ ಇಲ್ವಾ ಎಂದು ನಾನು ಪ್ರತಾಪ್ ಅವರು ಕೇಳಬೇಕು. ಅದು ಬಿಟ್ಟು ಮೋದಿ ದೇವರು ಎಂದರೆ ಅವರು ಪೂಜೆ ಮಾಡಿಕೊಳ್ಳಿ ನಾವೇನು ಬೇಡ ಎನ್ನುವುದಿಲ್ಲ. ಅದು ಅವರ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.

ಇಲ್ಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ಪತ್ರಾಪ್ ಸಿಂಹ ಅವರು ಬಕೆಟ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಅವರಿಗೆ ಭಟ್ಟಂಗಿತನ ಮಾಡುವುದು ಮಾತ್ರ ಗೊತ್ತಿದೆ. ಇಂದು ಅವರು ಭಟ್ಟಂಗಿತನ ಮಾಡಿ ತಮ್ಮ ಸ್ವಾರ್ಥಕ್ಕಾಗಿ ಉಪಯೋಗತನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ಪ್ರತಾಪ್ ಸಿಂಹ ಹೇಳಿದ್ದೇನು?
ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ರೈತರಿಗೆ ಕೃಷಿ ಚಟುವಟಿಕೆ ತೊಂದರೆಯಾದರೆ ಮೊದಲಿನಿಂದ ಶುರು ಮಾಡುವುದಕ್ಕೆ ಕೊಡುವ ಸಹಾಯಧನವೇ ಹೊರತು ಪರಿಹಾರ ಅಲ್ಲ. ದೇಶಾದ್ಯಂತ ನೆರೆ ಬಂದಾಗ ಯಾವ ಸರ್ಕಾರ ಕೂಡ ಪರಿಹಾರ ಕೊಡುವುದಿಲ್ಲ. ಅವರು ಕೊಡುವುದು ಸಹಾಯಧನ. ಮೋದಿ ಅವರು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಏನೇನು ಅನುದಾನ ಕೊಡಬೇಕಿತ್ತೋ ಆ ಅನುದಾನವನ್ನು ಕೊಟ್ಟಿದ್ದಾರೆ. ಎನ್‍ಡಿಆರೆಫ್ ತಂಡ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಅದಕ್ಕೆ ತಂಡ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಪರಿಹಾರ ಎಂದಾಕ್ಷಣ ಯಾರೂ ಕಿಸೆಯಿಂದ ಪರಿಹಾರ ಕೊಡುವುದಲ್ಲ. ಅದಕ್ಕೆ ಅಂತಾನೇ ತುಂಬಾನೇ ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *