ಮೋದಿ ‘ನೀಚ ವ್ಯಕ್ತಿ’-ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಣಿಶಂಕರ್ ಅಯ್ಯರ್

Public TV
2 Min Read

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿದೆ. ಮೇ 19ರ ಕೊನೆಯ ಸುತ್ತಿನ ಬಳಿಕ ಮೇ 23ಕ್ಕೆ ಫಲಿತಾಂಶ ಬರಲಿದೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಮೋದಿ ನೀಚ ವ್ಯಕ್ತಿ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

2017ರ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಾ ಅವರೊಬ್ಬ ನೀಚ ವ್ಯಕ್ತಿ ಎಂದು ಹೇಳಿದ್ದರು. ಇದೀಗ ಲೇಖನವೊಂದರಲ್ಲಿ ಮಣಿಶಂಕರ್ ಅಯ್ಯರ್ ಅದೇ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಒಳಪಟ್ಟಿದೆ.

2017ರಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಮಣಿಶಂಕರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನವನ್ನ ಆರಂಭಿಸಿದ್ದರಿಂದ ಕ್ಷಮೆ ಕೇಳಿ ವಿವಾದವನ್ನು ತಣ್ಣಗಾಗಿಸಿದ್ದರು. ಈಗ ಮೋದಿ ಅವರ ಸಮಾವೇಶ ಮತ್ತು ಭಾಷಣಗಳ ಕುರಿತು ಮಾತನಾಡುವಾಗ 2017ರಲ್ಲಿ ನಾನು ಪ್ರಧಾನಿ ಬಗ್ಗೆ ಹೇಳಿದ್ದನು ನೆನಪು ಮಾಡಿಕೊಳ್ಳಿ. ಅಂದು ನಾನು ಹೇಳಿದ್ದ ಮಾತುಗಳು ಇಂದು ನಿಜವಾಗಿವೆ ಅಲ್ವಾ ಎಂದು ಹೇಳಿದ್ದಾರೆ.

ಅಯ್ಯರ್ ಹೇಳಿಕೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರೀತಿಯ ರಾಜಕಾರಣ ಕುಟುಂಬದ ‘ಮಣಿ’ಯೊಂದು ಮೋದಿ ವಿರುದ್ಧದ ನೀಚ ಹೇಳಿಕೆಯ್ನು ಸಮರ್ಥಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *