ಗುಲಾಂ ನಬಿ ಅಜಾದ್‍ಗೆ ಜಮ್ಮು ಕಾಶ್ಮೀರಕ್ಕೆ ನೋ ಎಂಟ್ರಿ

Public TV
2 Min Read

ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ವಿಮಾನ ನಿಲ್ದಾಣದಲ್ಲೇ ತಡೆದು ಮರಳಿ ದೆಹಲಿಗೆ ಕಳುಹಿಸಲಾಗಿದೆ.

ಇಂದು ಮಧ್ಯಾಹ್ನ ಗುಲಾಂ ನಬಿ ಆಜಾದ್ ಅವರು ಜಮ್ಮು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆದರೆ ಸಿಬ್ಬಂದಿ ಗುಲಾಂ ನಬಿ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಟ್ಟಿಲ್ಲ. ಬದಲಿಗೆ ಎರಡು ಗಂಟೆಗಳ ಕಾಲ ಕಾಯಿಸಿ ಸುಮಾರು 4 ಗಂಟೆಗೆ ಮರಳಿ ದೆಹಲಿಗೆ ಕಳುಹಿಸಿದ್ದಾರೆ.

ಈ ಕುರಿತು ಗುಲಾಂ ನಬಿ ಆಜಾದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ಆಡಳಿತ ಮಂಡಳಿಯ ವರ್ತನೆ ಅಸಹಿಷ್ಣುತೆಯ ಸಂಕೇತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ನಡವಳಿಕೆ ಸರಿಯಲ್ಲ. ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ನಾಯಕರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬಾರದು ಎಂದರೆ, ಇನ್ನಾರು ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಜಮ್ಮು ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿರಿಸಲಾಗಿದೆ, ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಅವಕಾಶ ನೀಡಿಲ್ಲ. ಇದು ಅಸಹಿಷ್ಣುತೆಯ ಸಂಕೇತ ಎಂದು ಕಿಡಿಕಾರಿದ್ದಾರೆ.

ಗುಲಾಂ ನಬಿ ಆಜಾದ್ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಯತ್ನಿಸುತ್ತಿರುವುದು ಎರಡನೇ ಬಾರಿಯಾಗಿದ್ದು, ಆಗಸ್ಟ್ 8 ರಂದು ಸಹ ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆದು ವಾಪಸ್ ದೆಹಲಿಗೆ ಕಳುಹಿಸಲಾಗಿತ್ತು. ಇದೀಗ ಮತ್ತೆ ದೆಹಲಿಗೆ ಮರಳಿ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದೆ. ಸದ್ಯ ಪರಿಸ್ಥಿತಿ ಹೇಗಿದೆ ಮತ್ತು ಸ್ಥಳೀಯ ಕೈ ಕಾರ್ಯಕರ್ತರಿಂದಿಗೆ ಚರ್ಚಿಸಲು ಗುಲಾಂ ನಬಿ ಅಜಾದ್ ತೆರಳಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಅವರನ್ನು ಜಮ್ಮು ವಿಮಾನ ನಿಲ್ದಾಣದಿಂದ ದೆಹಲಿಗೆ ಕಳುಹಿಸುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ವಶಕ್ಕೆ ಪಡೆಯಲಾಗಿತ್ತು ಎಂದು ಜಮ್ಮು ಕಾಶ್ಮೀರದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಸಿ.ರವೀಂದ್ರ ಶರ್ಮಾ ತಿಳಿಸಿದ್ದಾರೆ.

ದೆಹಲಿಯಿಂದ ಜಮ್ಮು ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.30ಕ್ಕೆ ಆಗಮಿಸಿದ್ದರು. ಆಗ ಎರಡು ಗಂಟೆಗಳ ಕಾಲ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಸಂಜೆ 4.10ಕ್ಕೆ ಮರಳಿ ದೆಹಲಿಗೆ ಕಳುಹಿಸಿದ್ದಾರೆ. ಆಜಾದ್ ಅವರನ್ನು ಬರಮಾಡಿಕೊಳ್ಳಲು ತೆರಳಿದ್ದ ಕಾಂಗ್ರೆಸ್‍ನ ಹಿರಿಯ ನಾಯಕಾರದ ಮದನ್ ಲಾಲ್ ಶರ್ಮಾ, ತಾರಾ ಚಂದ್, ಜುಗುಲ್ ಕಿಶೋರ್ ಹಾಗೂ ನನ್ನನ್ನು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಲು ಬಿಡಲಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.

ಗುಲಾಂ ನಬಿ ಅಜಾದ್ ಕೇವಲ ಪಕ್ಷದ ಮುಖಂಡರನ್ನು ಭೇಟಿ ಮಾಡಲು ಬಂದಿದ್ದರು. ಸೆಕ್ಷನ್ 144ನ್ನು ರದ್ದು ಪಡಿಸಲಾಗಿದೆ. ಅಲ್ಲದೆ ಜಮ್ಮು ಪ್ರದೇಶದಾದ್ಯಂತ ಪರಿಸ್ಥಿತಿ ತಿಳಿಯಾಗಿದೆ ಎಂದು ಹೇಳುವ ಅಧಿಕಾರಿಗಳು ಆಜಾದ್ ಅವರು ಜಮ್ಮುವಿಗೆ ಭೇಟಿ ನೀಡಲು ಏಕೆ ಬಿಡಲಿಲ್ಲ ಎಂದು ಶರ್ಮಾ ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *