ಮೋದಿ ವಿರುದ್ಧ ಉಡುಪಿ ಕಾಂಗ್ರೆಸ್ಸಿನಿಂದ ಲಾಠಿ ಪ್ರತಿಭಟನೆ!

Public TV
2 Min Read

ಉಡುಪಿ: ಪ್ರಧಾನಿ ಮೋದಿ ವಿರುದ್ಧ ಬೀದಿಗಿಳಿದಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಪ್ರದರ್ಶಿಸಿ ಪ್ರತಿಭಟನೆ ಮಾಡುವ ಮೂಲಕ ಮೋದಿ ಭಾವಚಿತ್ರಕ್ಕೆ ಲಾಠಿಯೇಟು ನೀಡಿ ಧಿಕ್ಕಾರ ಕೂಗಿದ್ದಾರೆ.

ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಲಾಠಿ ಪ್ರದರ್ಶನ ಮಾಡಿ ಪೊಲೀಸರಿಗೆ ಅಚ್ಚರಿ ಮೂಡಿಸಿದರು. ಮಣಿಪಾಲದ ಟೈಗರ್ ಸರ್ಕಲ್‍ನಿಂದ ಆರಂಭವಾದ ಪ್ರತಿಭಟನಾ ಜಾಥಾ ಜಿಲ್ಲಾಧಿಕಾರಿ ಕಚೇರಿ ತನಕ ಸಾಗಿತ್ತು. ಈ ವೇಳೆ ಕಾರ್ಯಕರ್ತರು ಲಾಠಿಯನ್ನು ನೆಲಕ್ಕೆ ಬಡಿಯುತ್ತಾ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಬಡಿಯುತ್ತಾ, ಕೋಲಾಟ ಆಡುತ್ತಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲೂ ಆಗದೇ ಸುಮ್ಮನಿರಲು ಆಗದೇ ಮೂಕಪ್ರೇಕ್ಷಕರಂತಿದ್ದರು. ಅಲ್ಲದೇ ವಾರದ ಹಿಂದೆ ನಡೆದ ಭಾರತ್ ಬಂದ್ ವೇಳೆ ಪೊಲೀಸರು ಕಾಂಗ್ರೆಸ್ ನಾಯಕರು ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದರು. ಅದನ್ನು ಅಣಕಿಸಲು ಹೀಗೆ ಮಾಡಿದ್ದೀರಾ ಎಂದು ಯಾರನ್ನಾದರು ಕೇಳಿದರೆ ನಕ್ಕು ಸುಮ್ಮನಾದರು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ಪ್ರತಿಭಟಿಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ರಫೆಲ್ ಹಗರಣ ಹಾಗೂ ವಿಮಾನಗಳಿಗೆ ತಗಲಿರುವ ಮೊತ್ತದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಹಗರಣದ ಬಗ್ಗೆ ಗೊತ್ತಿದ್ದರೂ, ಪ್ರಧಾನಿ ಮೋದಿಯವರ ಭಯದಿಂದಾಗಿ ಅವರು ತುಟಿ ಬಿಚ್ಚುತ್ತಿಲ್ಲ. ಇದು ಇಡೀ ದೇಶಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಪ್ರತಿಭಟನೆ ವೇಳೆ ರಫೆಲ್ ಯುದ್ಧ ಮಾದರಿ ಹಿಡಿದು ಬಂದಿದ್ದ ಪ್ರತಿಭಟನಾಕಾರನೊಬ್ಬ ಎಲ್ಲರ ಗಮನಸೆಳೆದ. ಮೆರವಣಿಗೆ ವೇಳೆ ಅಲ್ಲಲ್ಲಿ ಕೈಯಲ್ಲಿದ್ದ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಎಲ್ಲರ ಗಮನಸೆಳೆಯುವಂತೆ ಮಾಡಿದ. ಅಲ್ಲದೇ ಕಾಂಗ್ರೆಸ್ ಬಾವುಟಕ್ಕೆ ವಿಮಾನ ಸಿಕ್ಕಿಸಿ ಮೋದಿ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದನು.

ಕಾಂಗ್ರೆಸ್ಸಿನ ಲಾಠಿ ಪ್ರತಿಭಟನೆ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೆ ಏಕಾಏಕಿ ನೂರಾರು ಕಾರ್ಯಕರ್ತರು ರಸ್ತೆಯಲ್ಲೇ ಲಾಠಿ ಹಿಡಿದು ಮೆರವಣಿಗೆ ಹಮ್ಮಿಕೊಂಡಿದ್ದರಿಂದ ಪೊಲೀಸರು ಸಹ ಕೈಕಟ್ಟಿ ಕುಳಿತರು. ಅಲ್ಲದೆ ಪ್ರತಿಭಟನೆಯ ಮುಂದಾಳತ್ವವವನ್ನು ಮಾಜಿ ಸಚಿವ ವಿನಯ್‍ಕುಮಾರ್ ಸೊರಕೆ ಹಾಗೂ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ವಹಿಸಿದ್ದರಿಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *