ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

Public TV
5 Min Read

– ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು
– ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿ
– ತೊಟ್ಟಿಲನ್ನೂ ತೂಗಿ, ಮಗು ಚಿವುಟುತ್ತಾ, ಕತ್ತು ಕುಯ್ಯುವ ರಾಜಕಾರಣ
– ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಆರಂಭವಾಗಿದೆ

ಬೆಂಗಳೂರು: ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಾರ್ ಮುಂದುವರಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ, ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಎಚ್‍ಡಿಕೆ ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ‘ಸಿದ್ದಹಸ್ತ’ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ. ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ‘ಅಹಿಂದ’ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ‘ಸಿದ್ದಹಸ್ತ ಶೂರರು’ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ಸಿದ್ದಹಸ್ತ ಸೂತ್ರಧಾರಿಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್‍ನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ರಾಜಕೀಯ ನರಮೇಧಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ. 2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ. ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ಸಿದ್ದಸೂತ್ರ ಹಣೆದಿದ್ದು ಯಾರು? ಎಂದು ಕ್ರಾಂಂಗ್ರೆಸ್ ಪಕ್ಷವನ್ನು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

ಈ ಸಿದ್ದಹಸ್ತರ ಸಿದ್ದಸೂತ್ರ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ. ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ. 2023ರ ಚುನಾವಣೆಯಲ್ಲಿ ಭೈರತಿ ಸುರೇಶ್‍ಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು? ಎಂದು ಕಾಂಗ್ರೆಸ್‍ಗೆ ಪ್ರಶ್ನೆಗಳ ಬಾಣವನ್ನು ಬಿಟ್ಟಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್‍ಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ. ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ

ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ರಸಸ್ವಾದ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ, ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಕಾಂಗ್ರೆಸ್ ನಡೆ ಕುರಿತಾಗಿ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ.

ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ಕಿರಾತಕ ರಾಜಕಾರಣ ಮಾಡಿದಿರಿ. ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ. ಸಿದ್ದಹಸ್ತರೇ ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ ಎಂದು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *