ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ, ಯತ್ನಾಳ್ ಅವರ ನ್ಯಾಯದ ಹೋರಾಟಕ್ಕೆ ನಮ್ಮ ಬೆಂಬಲ- ಆರ್.ಅಶೋಕ್

Public TV
2 Min Read

-ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಜೊತೆ ಈಗ ಖರ್ಗೆ ಹಗರಣ ನಡೆದಿದೆ
-ಪಂಚೆ ಉಟ್ಟುಕೊಂಡು ಬಂದ್ರೆ ಬೆಲೆ ಇಲ್ಲ. ಸೂಟು ಬೂಟು ಧರಿಸಿ, ಹಣದ ಸೂಟ್‌ಕೇಸ್ ಜೊತೆ ಬಂದ್ರೆ ಮಾತ್ರ ಬೆಲೆ

ಬೆಂಗಳೂರು: ಕಲಬುರ್ಗಿ (Kalburgi) ಜಿಲ್ಲೆಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ (Siddasiri Sugar Factory) ಮರು ಆರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ಪ್ರದೇಶವಾದ ಕಲಬುರ್ಗಿಯಲ್ಲಿ ಮುಳುಗಿಹೋಗಿದ್ದ ಸಕ್ಕರೆ ಕಾರ್ಖಾನೆಯನ್ನು ಶಾಸಕ ಯತ್ನಾಳ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಖಾನೆಯಿಂದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆತಿದೆ. ಸಾವಿರಾರು ರೈತರಿಗೆ ಲಾಭವಾಗುತ್ತಿದೆ ಎಂದರು.ಇದನ್ನೂ ಓದಿ: ಪ್ರಮೋದ್ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಬಾರದೆ ವಿಧಾನಸೌಧದ ಕಡೆಗೆ ಮುಖ ಮಾಡಿಕೊಂಡು ಕೂತಿದ್ದಾರೆ. ಒಂದು ಕಡೆ ಮುಡಾ ಹಗರಣ (MUDA), ಮತ್ತೊಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಇನ್ನೊಂದು ಖರ್ಗೆ ಹಗರಣ ನಡೆದಿದೆ. ಇಂತಹ ಸ್ಥಿತಿಯಲ್ಲಿ ಸ್ವಾಯತ್ತ ಸಂಸ್ಥೆಯ ಮೇಲೆ ಈ ಕೆಟ್ಟ ಸರ್ಕಾರ ಒತ್ತಡ ಹೇರಿದೆ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಶಾಸಕ ಯತ್ನಾಳ್ ಅವರು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಅವರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ. ಇದು ಸ್ವಾಯತ್ತ ಸಂಸ್ಥೆಯಾಗಿದ್ದರೂ, ಇಲ್ಲಿ ಸ್ವಾತಂತ್ರ‍್ಯ ಕಾಣುತ್ತಿಲ್ಲ. ಅಧಿಕಾರಿಗಳು ಪ್ರತಿಯೊಂದಕ್ಕೂ ಸಚಿವರ ಕಡೆ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ ಎಂದು ದೂರಿದರು.ಇದನ್ನೂ ಓದಿ: Video | ಆ.31ಕ್ಕೆ ಪವಿತ್ರಾಗೌಡ ಬೇಲ್‌ ಭವಿಷ್ಯ – ಅಲ್ಲಿವರೆಗೂ ಜೈಲೇ ಗತಿ

ಮಾಲಿನ್ಯ ನಿಯಂತ್ರಣ ಮಂಡಳಿ ಎಂದರೆ ಮಾಲಿನ್ಯವನ್ನು ನಿಯಂತ್ರಿಸುವ ಸಂಸ್ಥೆ. ಆದರೆ ಇಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲ. ಇಲ್ಲಿಗೆ ಪಂಚೆ ಉಟ್ಟುಕೊಂಡು ಬಂದರೆ ಬೆಲೆ ಇಲ್ಲ. ಸೂಟು ಬೂಟು ಧರಿಸಿ, ಹಣದ ಸೂಟ್‌ಕೇಸ್ ತೆಗೆದುಕೊಂಡು ಬಂದರೆ ಮಾತ್ರ ಬೆಲೆ. ಇದು ಕಾರ್ಪೊರೇಟ್ ಕಂಪನಿಯಂತಾಗಿದೆ. ಅಧಿಕಾರಿಗಳಿಗೆ ಮೇಲಿನಿಂದ ಕರೆ ಬಂದಿದ್ದು, ಯತ್ನಾಳ್ ಅವರಿಗೆ ತೊಂದರೆ ಕೊಡಲು ಸೂಚಿಸಲಾಗಿದೆ. ಮಂಡಳಿಯ ಅಧ್ಯಕ್ಷರು ಸ್ಥಳಕ್ಕೆ ಬಾರದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಹೈಕೋರ್ಟ್ ಆದೇಶವನ್ನು ಜಾರಿ ಮಾಡುವುದಿಲ್ಲ ಎಂದು ಲಿಖಿತವಾಗಿ ಕೊಡಲಿ ಎಂದು ಆಗ್ರಹಿಸಿದರು.

Share This Article