ಹೆಚ್‌ಡಿಕೆ ಸಿಎಂ ಆಗಲು ಕಾಂಗ್ರೆಸ್ ತ್ಯಾಗ ಮಾಡಿತ್ತು – ಡಿಕೆಶಿ

Public TV
2 Min Read

ರಾಮನಗರ: ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಅವರು ಮುಖ್ಯಮಂತ್ರಿ ಆಗಲು ಕಾಂಗ್ರೆಸ್‌ (Congress) ತ್ಯಾಗ ಮಾಡಿತ್ತು. ಇದನ್ನು ನೀವು ಆಲೋಚಿಸಬೇಕು ಎಂದು ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ನೆನಪಿಸಿದರು.

ತವರು ಜಿಲ್ಲೆಯಲ್ಲಿ ಪ್ರಜಾಧ್ವನಿ ಯಾತ್ರೆ ಕೈಗೊಂಡಿದ್ದ ಡಿ.ಕೆ.ಶಿವಕುಮಾರ್ ಶುಕ್ರವಾರ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿದರು. ಕ್ಷೇತ್ರದ ಹಲವೆಡೆ ಬಹಿರಂಗ ಸಭೆಗಳನ್ನ ನಡೆಸಿದರು. ಈ ವೇಳೆ ಬೃಹತ್ ಬೈಕ್‌ ರ‍್ಯಾಲಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಡಿಕೆಶಿ, ಜೆಡಿಎಸ್ (JDS) ಹಾಗೂ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ ನಾನೂ ಕೂಡಾ ಇದೇ ಜಿಲ್ಲೆಯ ಮಗ. ನನಗೂ ಒಂದು ಅವಕಾಶ ಕೊಡಿ ಎನ್ನುವ ಮೂಲಕ ಮೂಲಕ ಸಿಎಂ ಆಸೆಯನ್ನು ಮತ್ತೊಮ್ಮೆ ಬಿಚ್ಚಿಟ್ಟರು. ಇದನ್ನೂ ಓದಿ: ಸುಮಲತಾ ಬೆಂಬಲದಿಂದ ಮಂಡ್ಯದಲ್ಲಿ ನಮಗೆ ದೊಡ್ಡ ಶಕ್ತಿ ಬಂದಿದೆ – ಬೊಮ್ಮಾಯಿ

ನಾನು ಕೂಡ ಇದೇ ಜಿಲ್ಲೆಯವನು, ಹೊರಗಿನಿಂದ ಬಂದಿಲ್ಲ. ನಾನು ಸತ್ತರೆ ದೊಡ್ಡಆಲಹಳ್ಳಿಗೇ ನನ್ನ ಹೆಣ ಹೋಗುತ್ತದೆ. ನಾವು ಎಲ್ಲರಿಗೂ ಸಹಾಯ ಮಾಡಿದ್ದೇವೆ. ಕುಮಾರಣ್ಣ ಅವರು ಸಿಎಂ ಆಗಲು ಬೆಂಬಲ ನೀಡಿದ್ದು ಕಾಂಗ್ರೆಸ್. ದೇವೇಗೌಡರನ್ನು ಮಾಜಿ ಪ್ರಧಾನಿ ಎಂದು ಕರೆಯುವಂತೆ ಮಾಡಲು ಕಾಂಗ್ರೆಸ್ ತ್ಯಾಗ ಮಾಡಿದೆ. ಇದನ್ನು ನೀವು ಆಲೋಚಿಸಬೇಕು. ನಾನು ನಿಮ್ಮ ಮಗನಾಗಿದ್ದು, ನನಗೂ ಒಂದು ಅವಕಾಶ ನೀಡಿ ಎಂದು ದಳದ ಕಾರ್ಯಕರ್ತರಲ್ಲೂ ಮನವಿ ಮಾಡುತ್ತಿದ್ದೇನೆ. ನಾವು ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುತ್ತೇವೆ. ಇಲ್ಲಿ ಕೇವಲ ಬಾಲಕೃಷ್ಣ ಮಾತ್ರ ಅಭ್ಯರ್ಥಿಯಲ್ಲ. ಡಿ.ಕೆ. ಶಿವಕುಮಾರ್ ಅಭ್ಯರ್ಥಿಯಾಗಿದ್ದಾರೆ ಎಂದು ಆಶೀರ್ವಾದ ಮಾಡಿ ಎಂದರು.

ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಅವರ ಕಾಲದಲ್ಲಿ ಏನಾದ್ರೂ ಸಾಧನೆ ಮಾಡಿದ್ದಾರಾ? ನಿಮ್ಮ ಬದುಕಿನಲ್ಲಿ ಯಾವುದಾದರು ಬದಲಾವಣೆ ತಂದಿದ್ದಾರಾ? ನಾನು ಇಂಧನ ಸಚಿವನಾಗಿದ್ದಾಗ ನಿಮಗೆ ಉಚಿತವಾಗಿ ಟ್ರಾನ್ಸ್‌ಫಾರ್ಮರ್ ಕೊಟ್ಟು, 10 ಹೆಚ್‌ಪಿ ವಿದ್ಯುತ್ ಕೊಟ್ಟೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ ನೀಡಿದ್ದೇವೆ. ಬ್ಯಾಂಕುಗಳ ರಾಷ್ಟ್ರೀಕರಣ, ಸ್ತ್ರೀ ಶಕ್ತಿ ಸಂಘಗಳ ಸಾಲದಂತಹ ಕಾರ್ಯಕ್ರಮ ನೀಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುಮಲತಾರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ – ಹೆಚ್‌ಡಿಕೆ

ನಾವು ಶಿಂಷಾ ಹೊಳೆಯಿಂದ ಕಾವೇರಿ ನದಿ ನೀರು ತಂದು ಈ ಭಾಗಕ್ಕೆ ನೀಡಿದ್ದೇವೆ. ಈ ಕೆಲಸ ನಮ್ಮದು ಎಂದು ದಳದವರು, ಬಿಜೆಪಿಯ ಅಶ್ವಥ್‌ ನಾರಾಯಣ ಅವರು ಹೇಳಲು ಸಾಧ್ಯವೇ? ರಾಮನಗರ ಜಿಲ್ಲೆ ಕ್ಲೀನ್ ಮಾಡುತ್ತೇವೆ ಎಂದಿದ್ದ ಅಶ್ವಥ್‌ ನಾರಾಯಣ, ಜಿಲ್ಲೆಯಲ್ಲಿ ಒಂದು ಸಣ್ಣ ಕೆಲಸ ಮಾಡಲಿಲ್ಲ. ಬೈಲಮಂಗಲದ ಕೊಳಚೆ ನೀರನ್ನು ಸ್ವಚ್ಛ ಮಾಡಲು ಅವರಿಂದ ಆಗಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಯಾವ ಕೆಲಸವೂ ಆಗಿಲ್ಲ. ಮಾತು ಕೊಡುವುದು ಮುಖ್ಯವಲ್ಲ. ಕೊಟ್ಟ ಮಾತು ಉಳಿಸಿಕೊಳ್ಳುವುದು ಮುಖ್ಯ ಎಂದು ಟಾಂಗ್‌ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *