ಗೃಹಜ್ಯೋತಿಗೆ ಭರ್ಜರಿ ನೋಂದಣಿ- 8 ದಿನದಲ್ಲಿ 51 ಲಕ್ಷ ಮಂದಿ ಅರ್ಜಿ ಸಲ್ಲಿಕೆ

Public TV
1 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ದ ಮಹತ್ವಾಕಾಂಕ್ಷೆ ಯೋಜನೆ ಗೃಹಜ್ಯೋತಿ (Gruha Jyothi) ಗೆ ಭರ್ಜರಿ ನೋಂದಣಿ ಮಾಡಲಾಗಿದೆ.

ಅರ್ಜಿ ಸಲ್ಲಿಕೆ ಶುರುವಾಗಿ ಕೇವಲ 8 ದಿನದಲ್ಲಿ 51 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಮೊದಲ ದಿನದಿಂದ ಇಲ್ಲಿಯವರೆಗೆ ಒಟ್ಟು 51 ಲಕ್ಷದ 17 ಸಾವಿರದ 693 ಮಂದಿ ಅರ್ಜಿ ನೀಡಿದ್ದಾರೆ.

ಈ ಯೋಜನೆಯ ಫಲಾನುಭವಿಯಾಗಲು ಆನ್‍ಲೈನ್ ಮೂಲಕ ಸೇವಾ ಸಿಂಧು (Seva Sindhu) ಪೋರ್ಟಲ್‍ಗೆ ಭೇಟಿ ನೀಡಿ (https://sevasindhugs.karnataka.gov.in/) ಲಿಂಕ್ ಕ್ಲಿಕ್ ಮಾಡಿದರೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ವಿವರವಿದೆ. ಅದರಲ್ಲಿ ಗೃಹಜ್ಯೋತಿ ಮೇಲೆ ಕ್ಲಿಕ್ ಮಾಡಿದರೆ ಮುಂದಿನ ಪುಟ ತೆರೆದುಕೊಳ್ಳಲಿದೆ. ಕನ್ನಡ ಮತ್ತು ಇಂಗ್ಲಿಷ್‌ ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಈ ವೆಬ್‍ಸೈಟ್ ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್‍ಗಳಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದೆ.

ಬೆಂಗಳೂರು ಒನ್, ಗ್ರಾಮ ಒನ್, ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರ ಗೃಹಜ್ಯೋತಿ ನೋಂದಣಿಗೆ ಯಾವುದೇ ಗಡುವು ನೀಡಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡದೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದನ್ನೂ ಓದಿ: 2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

ಅರ್ಜಿ ಸಲ್ಲಿಸುವುದು ಹೇಗೆ..?: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಾಗ ಫಲಾನುಭವಿಗಳು ಆಧಾರ್ ಕಾರ್ಡ್, ವಿದ್ಯುಚ್ಛಕ್ತಿ ಬಿಲ್‍ನಲ್ಲಿ ಇರುವಂತೆ ಗ್ರಾಹಕರ ಐಡಿಗಳ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಒಂದು ವೇಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ಕರಾರು ಪತ್ರವನ್ನು ಸಹ ನೀಡಬೇಕು.

ನೋಂದಣಿ ಸಮಯದಲ್ಲಿ ಎಸ್ಕಾಂ ಹೆಸರು, ಖಾತೆ ಸಂಖ್ಯೆ, ಎಸ್ಕಾಂ ನಲ್ಲಿರುವಂತೆ ಖಾತೆದಾರರ ಹೆಸರು, ಖಾತೆದಾರರ ವಿಳಾಸ, ಎಸ್ಕಾಂ ಹೆಸರು, ಬಳಕೆದಾರರ ವಿಧ (ಬಾಡಿಗೆದಾರರು/ ಮಾಲೀಕರು), ಆಧಾರ್ ಸಂಖ್ಯೆ, ಅರ್ಜಿದಾರರ ಹೆಸರು, ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಈ ವಿವರಗಳನ್ನು ಭರ್ತಿ ಮಾಡಬೇಕಿದೆ.

Share This Article