ನನ್ನನ್ನು ಸೋಲಿಸಿದ್ದು ಕಾಂಗ್ರೆಸ್: ಬಿಜೆಪಿಗೆ ಮಾಜಿ ಸಚಿವ ಚಿಂಚನಸೂರು ಸೇರ್ಪಡೆ

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬುಧವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬುರಾವ್ ಚಿಂಚನಸೂರುರವರು ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾರಣವಲ್ಲ. ನನ್ನ ಸೋಲಿಗೆ ಕಾಂಗ್ರೆಸ್‍ನವರೇ ಮೂಲ ಕಾರಣ. ನನ್ನ ಏಳಿಗೆಯನ್ನು ಸಹಿಸದೇ, ಕುತಂತ್ರದಿಂದ ನನ್ನನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಕೋಲಿ ಸಮಾಜವನ್ನು ನಿರ್ಲಕ್ಷ್ಯ ಮಾಡಿದೆ. ಆದರೆ ಬಿಜೆಪಿಯು ಕೋಲಿ ಸಮುದಾಯದ ರಾಮನಾಥ್ ಕೋವಿಂದ್ ರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಯಡಿಯೂರಪ್ಪನವರ ಮೇಲೆ ನನಗೆ ಬಹಳ ವರ್ಷಗಳಿಂದಲೂ ಅಪಾರ ಗೌರವವಿದೆ. ಹೈದರಾಬಾದ್ ಕರ್ನಾಟಕದಲ್ಲಿ 46% ರಷ್ಟು ಕೋಲಿ ಸಮಾಜವೇ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಮಾಲೀಕಯ್ಯ ಗುತ್ತೇದಾರ್ ಜೊತೆಗೂಡಿ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೀವೇ ನೋಡುತ್ತಿರಿ, ನಾನು ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ಬಾಬುರಾವ್ ಚಿಂಚನಸೂರು ಸೇರ್ಪಡೆಯಿಂದಾಗಿ ಬಿಜೆಪಿಗೆ ಆನೆ ಬಲ ಬಂದಿದ್ದು, ಕಲಬುರಗಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಮಗೆ ಬಲ ಸಿಕ್ಕಿದೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿಯಾಗುತ್ತದೆ. ನಾವು ಬಹಳ ವರ್ಷಗಳಿಂದ ಬಿಜೆಪಿಗೆ ಸೇರುವಂತೆ ಪ್ರಯತ್ನಿಸುತ್ತಿದ್ದೇವು. ಆದರೆ  ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಮೆಚ್ಚಿ ಅವರೇ ಪಕ್ಷಕ್ಕೆ ಬಂದಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ, ರಾಜ್ಯ ಮಟ್ಟದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಕೊಡುತ್ತೇವೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ಇದೇ ಎಂದೇ ಅನ್ನಿಸುತ್ತಿಲ್ಲ. ವಿಧಾನಸೌಧದಲ್ಲಿ ಯಾವ ಸಚಿವರು ಸಹ ಕೈಗೇ ಸಿಗುತ್ತಿಲ್ಲ. ಜಿಲ್ಲೆಗಳಿಗೂ ಹೋಗಿ ಜನರ ಕಷ್ಟ ಕೂಡ ಕೇಳುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಗುದ್ದಾಟದಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ನಾವು ಯಾರೂ ಸಹ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು. ಸಮ್ಮಿಶ್ರ ಸರ್ಕಾರದ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು. ಅವರೇ ಬಡಿದಾಕೊಂಡು ಕುಸಿದರೆ, ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು.

ಸೇರ್ಪಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್, ಚಿಂಚನಸೂರ್ ಪತ್ನಿ ಅಮರೇಶ್ವರಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಂದಮೂರಿ ಹರಿಕೃಷ್ಣ ನಿಧನಕ್ಕೆ ಮೌನ ಆಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *