ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

Public TV
2 Min Read

ನವದೆಹಲಿ: ಪಕ್ಷ ವಿರೋಧ ಹೇಳಿಕೆ ನೀಡಿರುವುದಕ್ಕಾಗಿ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ಅವರನ್ನು ಕಾಂಗ್ರೆಸ್‌ 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಮರುದಿನವೇ ಕಾಂಗ್ರೆಸ್‌ ಹೈಕಮಾಂಡ್‌ (Congress Highcommand) ಆಚಾರ್ಯ ವಿರುದ್ಧ ಈ ಕ್ರಮ ಕೈಗೊಂಡಿದೆ. ಉಚ್ಛಾಟನೆಯ ಬೆನ್ನಲ್ಲೇ ಆಚಾರ್ಯ ಅವರು ಎಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ, ರಾಮ ಮತ್ತು ರಾಷ್ಟ್ರ… ಯಾವುದೇ ರಾಜಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಅಶಿಸ್ತು ಮತ್ತು ಪಕ್ಷದ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಮೋದ್ ಕೃಷ್ಣಂ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸುವ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಸ್ತಾವನೆಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಕಾಂಗ್ರೆಸ್ ಭಾಗವಹಿಸದಿರುವುದನ್ನು ಆಚಾರ್ಯ ಪ್ರಮೋದ್ ಕೃಷ್ಣಂ ಟೀಕಿಸಿದ್ದರು. ಅಲ್ಲದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು (Bhart Jodo Nyay Yatre) ರಾಜಕೀಯ ಪ್ರವಾಸೋದ್ಯಮ ಎಂದು ಕರೆದಿದ್ದರು. ಕಾಂಗ್ರೆಸ್ ಇನ್ನೂ ಟ್ರಾವೆಲಿಂಗ್ ಮಾಡುತ್ತಿದೆ, ಆದರೆ ಇತರ ಪಕ್ಷಗಳು ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿವೆ ಎಂದು ಪಕ್ಷ ವಿರುದ್ಧವೇ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಈಶ್ವರಪ್ಪ ಸ್ವಲ್ಪ ಉಗ್ರವಾದಿ, ಆದ್ರೆ ಗುಂಡು ಹಾರಿಸುವಷ್ಟು ಉಗ್ರರಲ್ಲ: ಸದಾನಂದ ಗೌಡ

ಆಚಾರ್ಯ ಪ್ರಮೋದ್ ಕೃಷ್ಣಂ ಯಾರು?: 2019 ರ ಲೋಕಸಭಾ ಚುನಾವಣೆಯಲ್ಲಿ ಲಕ್ನೋದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೂ ಅವರು 1.8 ಲಕ್ಷ ಮತಗಳನ್ನು ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. 2014 ರಲ್ಲಿ ಯುಪಿಯ ಸಂಭಾಲ್‌ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ (Loksabha Election) ಸ್ಪರ್ಧಿಸಿ ವಿಫಲರಾಗಿದ್ದರು.

ಆಚಾರ್ಯ ಪ್ರಮೋದ್ ಅವರು ಈ ಹಿಂದೆ ಉತ್ತರ ಪ್ರದೇಶ ಉಸ್ತುವಾರಿ ಹೊಂದಿದ ಪ್ರಿಯಾಂಕಾ ಗಾಂಧಿಯವರಿಗೆ ಸಲಹೆ ನೀಡಲು ರಚಿಸಿದ್ದ ಕಾಂಗ್ರೆಸ್ ನ ಉತ್ತರ ಪ್ರದೇಶ ಸಲಹಾ ಮಂಡಳಿಯ ಭಾಗವಾಗಿದ್ದರು. ತಾವು ಕಣ್ಣಿಟ್ಟಿದ್ದ ಸಂಭಾಲ್ ಮತ್ತು ಲಕ್ನೋ ಕ್ಷೇತ್ರಗಳಿಗೆ ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಈ ಉಚ್ಚಾಟನೆ ವಿಶೇಷ ಮಹತ್ವ ಪಡೆದಿದೆ.

Share This Article