ಸಂಜೆ ಬರಬೇಕಿದ್ದ ಗುಜರಾತ್ ರಾಜ್ಯಸಭೆ ಎಲೆಕ್ಷನ್ ರಿಸಲ್ಟ್ ಇನ್ನೂ ಬಂದಿಲ್ಲ ಯಾಕೆ?

Public TV
2 Min Read

ನವದೆಹಲಿ: ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕ್ಷಣಕ್ಕೊಂದು ವಿದ್ಯಮಾನ ನಡೆಯುತ್ತಿದ್ದು, ಭಾರೀ ಹೈಡ್ರಾಮಾ, ಕೆಸರೆರಚಾಟಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಅಡ್ಡಮತದಾನವಾಗಿದೆ. ಬೆಂಗಳೂರಿನ ಈಗಲ್‍ಟನ್ ರೆಸಾರ್ಟ್‍ನಲ್ಲಿದ್ದುಕೊಂಡು ಇಲ್ಲೇ ರಾಜಾತಿಥ್ಯ ಸ್ವೀಕರಿಸಿದ ಕಾಂಗ್ರೆಸ್ ಶಾಸಕರೇ ಪಕ್ಷಕ್ಕೇ ಕೈ ಕೊಟ್ಟಿದ್ದಾರೆ.

ಅಡ್ಡ ಮತದಾನವಾದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಬಂಟ ಅಹ್ಮದ್ ಪಟೇಲ್ ಮಧ್ಯೆ ಫೋಟೋ ಫಿನಿಶ್, ನೆಕ್ ಟು ನೆಕ್ ಫೈಟ್ ಎನ್ನುವಂತಾಗಿದೆ.

ಕಾಂಗ್ರೆಸ್ ಇಬ್ಬರು ಶಾಸಕರು ಅಮಿತ್ ಶಾಗೆ ತೋರಿಸಿ ವೋಟ್ ಮಾಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್, ಆ ವೋಟನ್ನ ಅಸಿಂಧುಗೊಳಿಸಲು ಹಾಗೂ ಚುನಾವಣೆಯನ್ನೇ ರದ್ದು ಗೊಳಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕಾಂಗ್ರೆಸ್‍ನ ಈ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಚುನಾವಣಾ ಆಯೋಗದ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ.

ಶಾಸಕರ ಮತದಾನವನ್ನು ಕೇಂದ್ರ ಚುನಾವಣಾ ಆಯೋಗ ಮಾನ್ಯ ಮಾಡಿದ್ದು ಈಗ ಮತ ಎಣಿಕೆ ನಡೆಯುತ್ತಿದೆ. ಹೀಗಾಗಿ, ಸಂಜೆಯೇ ಬರಬೇಕಾಗಿದ್ದ ಫಲಿತಾಂಶ ವಿಳಂಬವಾಗುತ್ತಿದೆ. ಸದ್ಯಕ್ಕೆ ಲಭಿಸಿರುವ ಮಾಹಿತಿಗಳ ಪ್ರಕಾರ ಕಾಂಗ್ರೆಸ್‍ನ ಅಹ್ಮದ್ ಪಟೇಲ್ ಸೋಲುವ ಸೂಚನೆ ಎದುರಾಗಿದೆ.

ಮಾದ್ಯಮಗಳಿಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಅಹ್ಮದ್ ಪಟೇಲ್ ಪರ ಕಾಂಗ್ರೆಸ್‍ನ 42, ಎನ್‍ಸಿಪಿಯ ಇಬ್ಬರ ಪೈಕಿ ಒಬ್ಬರಷ್ಟೇ ಮತಚಲಾಯಿಸಿದ್ದಾರೆ. ಜೆಡಿಯುನ ಓರ್ವ ಶಾಸಕ ಸಹ ಬಿಜೆಪಿ ಪರ ವಾಲಿದ್ದಾರೆ ಎನ್ನಲಾಗಿದೆ.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಒಟ್ಟು ಮೂರು ಸ್ಥಾನಗಳಿವೆ. ಬಿಜೆಪಿಯಿಂದ ಅಮಿತ್ ಶಾ, ಸ್ಮøತಿ ಇರಾನಿ, ಜೊತೆಗೆ ಇತ್ತೀಚೆಗೆ ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ್ದ ಬಲವಂತ್ ಸಿನ್ಹಾ ರಜಪೂತ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ಗುಜರಾತ್ ವಿಧಾನಸಭೆ 182 ಸದಸ್ಯರ ಬಲವನ್ನು ಹೊದಿದ್ದು, 6 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ 176ಕ್ಕೆ ಸದಸ್ಯ ಬಲ ಕುಗ್ಗಿತ್ತು. ಹೀಗಾಗಿ ರಾಜ್ಯಸಭಾ ಆಯ್ಕೆಗೆ ಪ್ರತಿ ಅಭ್ಯರ್ಥಿಯ ಆಯ್ಕೆಗೆ 45 ಮತಗಳನ್ನು ಪಡೆಯಬೇಕಿದೆ.

ಕಾಂಗ್ರೆಸ್ ಬೇಡಿಕೆ ಏನು? ಹರ್ಯಾಣದಲ್ಲಿ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೊಬ್ಬರು ತಪ್ಪಾಗಿ ತಮ್ಮ ಮತವನ್ನು ತೋರಿಸಿದ್ದರು. ಇದರಿಂದಾಗಿ ಆ ಮತಗಳು ಅನರ್ಹಗೊಂಡಿತ್ತು. ಹೀಗಾಗಿ ಕಾಂಗ್ರೆಸ್ ಶಾಸಕ ಮತವನ್ನು ಅಸಿಂಧುಗೊಳಿಸಬೇಕು ಎಂದು ಕೈ ನಆಯಕರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *