ಆಪ್ತರಿಗೆ ಟಿಕೆಟ್ ಕೊಡಿಸಲು ಸಿದ್ದು, ಖರ್ಗೆ ಜಟಾಪಟಿ – ದೆಹಲಿಯಲ್ಲಿಂದು ಮತ್ತೆ ಸಭೆ

Public TV
1 Min Read

ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಅದ್ಯಾಕೋ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಭೆಗಳ ಮೇಲೆ ಸಭೆಗಳು ನಡೆಸಿದ್ರೂ ರಾಜ್ಯ ನಾಯಕರು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಶುಕ್ರವಾರ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ತಮಗೆ ಎರಡು ಕ್ಷೇತ್ರ, ಪುತ್ರ ಯತೀಂದ್ರ, ಆಪ್ತ ಮಹದೇವಪ್ಪ ಪುತ್ರ ಹೀಗೆ 7 ಜನ ಬಂಡಾಯ ಶಾಸಕರು, ವಲಸಿಗರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದ್ರೆ, ಸಿಎಂ ಡಿಮ್ಯಾಂಡ್‍ಗೆ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮುಂದೆಯೇ ರಾಜ್ಯ ಕಾಂಗ್ರೆಸ್ ನಾಯಕರ ಭಿನ್ನಮತ ಸ್ಫೋಟಗೊಂಡಿತ್ತು. ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ನಡುವೆ ಜಟಾಪಟಿ ಏರ್ಪಟ್ಟಿದ್ದು ಯಾರು ಕೂಡಾ ಪಟ್ಟು ಸಡಿಲಿಸುವಂತೆ ಕಾಣ್ತಿಲ್ಲ ಎನ್ನಲಾಗಿತ್ತು.

ಸಿದ್ದು-ಖರ್ಗೆ ಜಗಳ ಕಂಡು ಹೈಕಮಾಂಡ್ ದಂಗಾಗಿದ್ದು, ಮತ್ತೊಮ್ಮೆ ಕೂತು ಚರ್ಚಿಸಲು ಸೂಚಿಸಿದೆ. ಹೀಗಾಗಿ ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಪೂರ್ವಭಾವಿ ಸಭೆ ನಡೆಯಲಿದೆ. ಈ ಎಲ್ಲಾ ಗೊಂದಲಗಳ ನಡುವೆ ಒಂದೆ ಹಂತದಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ 137 ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ಬಾಕಿ 86 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಬೇಕಿದೆ. ಈ ಎಲ್ಲಾ ಭಿನ್ನಮತ ಶಮನವಾದ್ರೆ ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *