ಬೆಂಗಳೂರು: ಕರ್ನಾಟಕ ಬಿಟ್ಟು ತೆಲಂಗಾಣ ಮಾಡೆಲ್ ಜಾತಿ ಜನಗಣತಿ (Caste Census) ನಡೆಸಲು ಕಾಂಗ್ರೆಸ್‌ನ ಒಬಿಸಿ ಸಲಹಾ ಮಂಡಳಿ ನಿರ್ಣಯ ಮಾಡಿರುವ ವಿಚಾರಕ್ಕೆ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ (Sunil Kumar) ಲೇವಡಿ ಮಾಡಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸುನಿಲ್ ಕುಮಾರ್, ಸಿದ್ದರಾಮಯ್ಯನವರೇ.. ಆರು ತಿಂಗಳ ಹಿಂದೆ ಕರ್ನಾಟಕ ಮಾದರಿಯಲ್ಲಿ ಜಾತಿಗಣತಿ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ಕೊಟ್ಟಿದ್ದೀರಿ. ವೀರಾವೇಶದ ಭಾಷಣ ಮಾಡಿದ್ದೀರಿ. ಆದರೆ, ನಿಮ್ಮ ಕರ್ನಾಟಕ ಮಾಡೆಲ್ ಜಾತಿಗಣತಿಯನ್ನು ನಿಮ್ಮದೇ ಹೈಕಮಾಂಡ್ ತಿಪ್ಪೆಗೆ ಎಸೆಯಿತು. ಈಗ ನಿಮ್ಮ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎಐಸಿಸಿ ಹಿಂದುಳಿದ ವರ್ಗದ ಸಭೆಯಲ್ಲಿ ತೆಲಂಗಾಣ ಮಾದರಿಯಲ್ಲಿ ರಾಷ್ಟ್ರಾದ್ಯಂತ ಜಾತಿಗಣತಿ ಮಾಡಬೇಕೆಂದು ಕೇಂದ್ರಕ್ಕೆ ಸಲಹೆ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬ ಮಾತು ಕೇಳಿದೆ. ಹಿಂದುಳಿದ ವರ್ಗದ ಛಾಂಪಿಯನ್ ಎಂಬ ಸ್ವಘೋಷಿತ ಬಿರುದನ್ನು ನಿಮ್ಮದೇ ಹೈಕಮಾಂಡ್ ಈಗ ಕಿತ್ತು ಹಾಕಿದೆ ಎಂದು ಟಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆ: ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜೊತೆ ರೋಲ್ಸ್ ರಾಯ್ಸ್ ಕಂಪನಿ ಮಾತುಕತೆ
ಇಷ್ಟಾದರೂ ಸಿದ್ದರಾಮಯ್ಯ ಅಭಿಮಾನ ಶೂನ್ಯರಂತೆ ಈ ಹರಿದ ಪೋಷಾಕು ಧರಿಸಿ ನೀವ್ಯಾಕೆ ಮೆರೆಯುತ್ತಿದ್ದಾರೆ? ಬಿಜೆಪಿಗೆ ಹಿಂದುಳಿದ ವರ್ಗದ ಬಗ್ಗೆ ಕಾಳಜಿ ಇಲ್ಲ ಎಂದು ಪುಗ್ಸಟ್ಟೆ ಭಾಷಣ ಬಿಗಿಯುತ್ತಾರೆ. ಅದಕ್ಕೆ ಮುನ್ನ ಕಾಂಗ್ರೆಸ್ ಹೈಕಮಾಂಡ್ ನಿಮ್ಮ ಮೇಲಿಟ್ಟ ಕಾಳಜಿಯನ್ನು ಸ್ವಲ್ಪ ಅವಲೋಕಿಸಲಿ. ದೀಪದ ಬುಡ ಕತ್ತಲಲ್ಲವೇ ಎಂದು ಸುನಿಲ್ ಕುಮಾರ್ ಕಾಲೆಳೆದಿದ್ದಾರೆ.