ಭವಿಷ್ಯದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ: ಶ್ರೀರಾಮುಲು

Public TV
2 Min Read

ದಾವಣಗೆರೆ: ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು ಒಂದು ಕಡೆ ನಾನು ಈ ಸರ್ಕಾರವನ್ನು ಉಳಿಸುತ್ತೇನೆ ಎಂದು ಹೇಳುತ್ತಾರೆ. ಮತ್ತೊಂದು ಕಡೆ ನಾನು ಯಾವ ಸರ್ಕಾರ ಉಳಿಸುತ್ತೇನೆ ಎಂದು ಹೇಳಿದ್ದೆ ಎಂದು ಹೇಳುತ್ತಾರೆ. ಇಲ್ಲಿ ದ್ವಂದ್ವ ನೀತಿಯಿಂದ ಚುನಾವಣೆ ರಾಜಕಾರಣ ಪ್ರಾರಂಭವಾಗಿದೆ. ಈ ದ್ವಂದ್ವ ನೀತಿಯಿಂದ ಭವಿಷ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಸ್ತಿತ್ವ ಇರುವುದಿಲ್ಲ. ಈಗ ಬಿಜೆಪಿ ದೇಶದಲ್ಲಿ ಹೆಮ್ಮರವಾಗಿ ಬೆಳೆಯುತ್ತದೆ. ನಮ್ಮ ಸರ್ಕಾರ 105 ಸೀಟ್ ಗೆದ್ದರೂ ಅಧಿಕಾರಕ್ಕೆ ಬರಲು ಆಗಲಿಲ್ಲ. ಶಾಸಕರು ರಾಜೀನಾಮೆ ಕೊಟ್ಟ ಕಾರಣ ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಶಾಸಕರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿಯವರು ಚುನಾವಣೆಯಲ್ಲಿ ಕೋಟ್ಯಂತರ ರೂ. ಹಣ ಚೆಲ್ಲುತ್ತಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮುಲು ಅವರು, ಇದೆಲ್ಲ ಬಡಾಯಿಗೋಸ್ಕರ ಮಾತನಾಡುವಂತ ಮಾತುಗಳಿದು. ಬುಧವಾರ ಹುಣಸೂರಿನಲ್ಲಿ ಕಾಂಗ್ರೆಸ್‍ನ ಕೋಟ್ಯಂತರ ರೂ. ಸೀಜ್ ಆಯಿತು. ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿ ಅದರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹತ್ತು ವರ್ಷದ ಭ್ರಷ್ಟಾಚಾರದ ಹಣ ಇಡೀ 15 ಕ್ಷೇತ್ರದಲ್ಲಿ ಓಡಾಡುತ್ತಿದೆ ಎಂದು ತಿರುಗೇಟು ನೀಡಿದರು.

ನಾನು ಬುಧವಾರ ಮಾಜಿ ಪ್ರಧಾನಿ, ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ತಮ್ಮ ಮಗನ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಈಗ ಉಪಚುನಾವಣೆ ನಂತರ ಮಧ್ಯಂತರ ಚುನಾವಣಾ ಬರುತ್ತೆ ಎನ್ನುವುದು ಸರಿಯಲ್ಲ. ಈಗ ವಾತಾವರಣ ಬೇರೆ ಇದೆ. ಅವರು ಹಿರಿಯರು, ನಾನು ಅವರಿಗೆ ಟೀಕೆ ಮಾಡುವುದಿಲ್ಲ. ನನ್ನ ಪ್ರಕಾರ ಯಾವುದೇ ಮಧ್ಯಂತರ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.

ನಾನು ಸಿದ್ದರಾಮಯ್ಯ ಅವರನ್ನು ಅತ್ಯಂತ ಗೌರವದಿಂದ ವಿನಂತಿ ಮಾಡಿಕೊಳ್ಳುತ್ತೇನೆ. ಏಕೆಂದರೆ ಇಂದು ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕರು. ಶ್ರೀರಾಮುಲು ಅವರು ಖುರ್ಚಿಗೆ ಅಂಟಿಕೊಂಡು ಇರುತ್ತಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಖುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸುವುದು ನನ್ನ ಆದ್ಯತೆ. ನಾನು ಇದನ್ನು ಮಾಡಿಯೇ ಮಾಡುವೆ. ಅನಗತ್ಯವಾಗಿ ನನ್ನ ವಿರುದ್ಧ ವಾಗ್ದಾಳಿ ಸರಿಯಲ್ಲ ಎಂದು ತಿಳಿಸಿದರು.

ಇದೇ ವೇಳೆ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಿದ ಅವರು, ನಾನು ಡಿಕೆಶಿ ಅಂತಹವರನ್ನು ನೋಡಿದ್ದೇನೆ. ದೊಡ್ಡ ಶ್ರೀಮಂತರೆ ಯಾವ ರೀತಿ ಆಗಿದ್ದಾರೆ ಎಂಬ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಡಿಕೆಶಿ ಅವರು ಬುಗುರಿ ರೀತಿ ಅಲ್ಲ ಬೇರೆ ರೀತಿ ಆಡಿಸಿದರೂ ಜನರು ಅವರನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಅವರು ಮಾಡಿದ ಕೆಲಸಗಳನ್ನು ಜನರು ಗಮನಿಸಿದ್ದಾರೆ. ಈಗಾಗಲೇ ಅವರು ಪಶ್ಚಾತಾಪ ಪಡುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *