ನಾವು ಹಿಂದುಳಿಯಲು ಕಾಂಗ್ರೆಸ್, 370 ವಿಧಿ ಕಾರಣ – ವೈರಲ್ ಆಗ್ತಿದೆ ಲಡಾಖ್ ಯುವ ಸಂಸದನ ಭಾಷಣ

Public TV
2 Min Read

ನವದೆಹಲಿ: ನಮ್ಮ ಪ್ರದೇಶ ಭಾರತದಲ್ಲಿ ಹಿಂದುಳಿಯಲು ಕಾಂಗ್ರೆಸ್ ಮತ್ತು ಸಂವಿಧಾನದ 370ನೇ ವಿಧಿ ಕಾರಣ ಎಂದು ಲಡಾಖ್ ಬಿಜೆಪಿ ತ್ಸೆರಿಂಗ್ ನಮ್‍ಗ್ಯಾಲ್ ಅಭಿಪ್ರಾಯ ಪಟ್ಟಿದ್ದಾರೆ.

370ನೇ ವಿಧಿಯ ರದ್ದು ಚರ್ಚೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಹಿಂದಿನ ರಾಜ್ಯ ಸರ್ಕಾರಗಳು ಸರ್ಕಾರಿ ಕೆಲಸಗಳನ್ನು ನೀಡುವ ವಿಚಾರದಲ್ಲಿಯೂ ಸಹ ಲಡಾಕ್ ಜನರಿಗೆ ತಾರತಮ್ಯ ಮಾಡಿವೆ. ಇಷ್ಟು ವರ್ಷ ಕಳೆದರೂ ಲಡಾಖ್‍ನಲ್ಲಿ ಯಾವುದೊಂದೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಿಲ್ಲ. ಇದು ಸಮಾನತೆಯೇ ಎಂದು ಪ್ರಶ್ನಿಸಿದ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಡಿ ಒಂದು ವಿಶ್ವವಿದ್ಯಾಲಯವನ್ನು ಲಡಾಖ್ ಪಡೆದುಕೊಂಡಿದೆ ಎಂದು ತಿಳಿಸಿದರು.

ಕಾಶ್ಮೀರ ರಾಜಕೀಯ ಪಕ್ಷಗಳ ನಿಲುವು ತುಂಬಾ ವಿಪರ್ಯಾಸವಾಗಿದ್ದು, ಒಂದೆಡೆ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ. ಇನ್ನೊಂದೆಡೆ ಅವರಿಗೆ ಅನುಕೂಲವಾಗುವ ಚುನಾವಣೆಗಳಲ್ಲಿ ಭಾಗವಹಿಸುತ್ತಾರೆ. ಕಾಶ್ಮೀರ ಕೇಂದ್ರಿತ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ವಿರುದ್ಧ ವಾಗ್ದಾಳಿ ನಡೆಸಿದ ತ್ಸೆರಿಂಗ್ ನಮ್‍ಗ್ಯಾಲ್, ಎರಡು ಕುಟುಂಬದ ಸದಸ್ಯರು ಇನ್ನೂ ಮಾದಕ ವ್ಯಸನಿಗಳಾಗಿದ್ದಾರೆ. ಅಲ್ಲದೆ, ಕಾಶ್ಮೀರ ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ ಎಂದು ಕಿಡಿಕಾರಿದರು.

ಇಲ್ಲಿರುವ ಮುಫ್ತಿ ಮತ್ತು ಅಬ್ದುಲ್ಲಾ ಈ ಎರಡು ಕುಟುಂಬಗಳ ಸದಸ್ಯರು ಮಾತ್ರ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿದ್ದಾರೆ. ನಿನ್ನೆ ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ನಂತರ ಈಗ ಸಮಾನತೆಯ ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಹಣ ಸಂಗ್ರಹಿಸಿದಾಗ, ಲಡಾಖ್ ಅಭಿವೃದ್ಧಿಗೆಂದು ಮೀಸಲಿರಿಸಿದ್ದ ಹಣವನ್ನು ಕಾಶ್ಮೀರಕ್ಕೆ ವರ್ಗಾಯಿಸಿಕೊಂಡಿರಿ. ಇದು ನಿಮ್ಮ ಸಮಾನತೆಯೇ ಎಂದು ಖಾರವಾಗಿ ಪ್ರಶ್ನಿಸಿದರು.

ಲೋಕಸಭಾ ಚುನಾವಣೆಯಲ್ಲಿ ಲೇಹ್, ಲಡಾಖ್ ಮತ್ತು ಕಾರ್ಗಿಲ್ ಜನರು ಕೇಂದ್ರಾಡಳಿತ ಪ್ರದೇಶಕ್ಕಾಗಿಯೇ ಮತ ಹಾಕಿದ್ದರು. ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ವೇಳೆ ಹೆಚ್ಚಿನ ಜನರು ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದರು ಎಂದು ತ್ಸೆರಿಂಗ್ ನಮ್‍ಗ್ಯಾಲ್ ಇದೇ ವೇಳೆ ತಿಳಿಸಿದರು.

ನಿನ್ನೆ ರಾಜ್ಯಸಭೆಯ ಕಾಂಗ್ರೆಸ್ ಮುಖಂಡರು ಲಡಾಕ್‍ಗೆ ಏನಾಗಬಹುದು ಎಂದು ಬೊಬ್ಬೆ ಹೊಡೆಯುತ್ತಿದ್ದರು. 2008ರಲ್ಲಿ ಕಾಂಗ್ರೆಸ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 8 ಹೊಸ ಜಿಲ್ಲೆಗಳನ್ನು ರಚಿಸಿತು. ಆಗ ನಾಲ್ಕು ಜಮ್ಮುವಿಗೆ ಉಳಿದ ನಾಲ್ಕು ಕಾಶ್ಮೀರಕ್ಕೆ ನೀಡಿ ಎಂದು ಜಮ್ಮುವಿನ ಜನರು ಹೋರಾಡಿದರು. ಆದರೆ, ಲಡಾಖ್‍ಗೆ ಏನೂ ಸಿಗಲಿಲ್ಲ. ಇದು ನಿಮ್ಮ ಸಮಾನತೆಯೇ ಎಂದು ನಮ್‍ಗ್ಯಾಲ್ ಪ್ರಶ್ನಿಸಿದರು.

ನಿಮ್ಮಂತೆ ಜಮ್ಮು ಮತ್ತು ಕಾಶ್ಮೀರದ ಕುರಿತು ಪುಸ್ತಕದಲ್ಲಿ ಓದಿ ನಾನು ಇಲ್ಲಿಗೆ ಬಂದಿಲ್ಲ. ಲಡಾಖ್ ನೆಲದ ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಇಲ್ಲಿಗೆ ಬಂದಿದ್ದೇನೆ. ನೀವು ಕಾಶ್ಮೀರಿ ಮತ್ತು ಡೋಗ್ರಿಗಳನ್ನು ನಿಗದಿತ ಭಾಷೆ ಎಂದು ಗುರುತಿಸುತ್ತೀರಿ. ಆದರೆ, ಲಡಾಖಿ ಜನರ ಭಾಷೆಯ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ತ್ಸೆರಿಂಗ್ ನಮ್‍ಗ್ಯಾಲ್ ಒಂದೊಂದೆ ಅಂಶವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಮಿತ್ ಶಾ ಸೇರಿದಂತೆ ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸುತ್ತಿದ್ದರು. ಅಮಿತ್ ಶಾ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಾಕಿ ಮೆಚ್ಚುಗೆ ಸೂಚಿಸಿದ್ದಾರೆ.

ನಮ್‍ಗ್ಯಾಲ್ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾಷಣದ ಕೊನೆಯಲ್ಲಿ ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಸಹ ನಮ್‍ಗ್ಯಾಲ್ ಅವರ ಭಾಷಣ ಮತ್ತು ಉತ್ಸಾಹವನ್ನು ಶ್ಲಾಘಿಸಿದರು. ಸದನವು ನಮ್‍ಗ್ಯಾಲ್ ಅವರಂತಹ ಯುವ ಸದಸ್ಯರನ್ನು ಪ್ರೋತ್ಸಾಹಿಸಬೇಕು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *