ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಪದ್ಮ ಪ್ರಶಸ್ತಿ – ಕಾಂಗ್ರೆಸ್‌ ಟೀಕೆ

2 Min Read

ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಸಾಧಕರಿಗೆ ನೀಡಿರುವ ಪದ್ಮ ಪುರಸ್ಕಾರ (Padma Awards) ಈಗ ವಿವಾದಕ್ಕೆ ಕಾರಣವಾಗಿದೆ. ಮುಂಬರುವ ಕೇರಳ (Kerala), ತಮಿಳುನಾಡು (Tamil Nadu), ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆ (Election) ದೃಷ್ಟಿಯಲ್ಲಿಟ್ಟುಕೊಂಡು ಪದ್ಮ ಪ್ರಶಸ್ತಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಷ್ಟ್ರೀಯಗೌರವಗಳನ್ನು ಚುನಾವಣಾ ಸಾಧನವನ್ನಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಬಿಜೆಪಿಯನ್ನು ಸದಾ ವಿರೋಧಿಸುತ್ತಿದ್ದ ಮಾಜಿ ಸಿಎಂ ಕಮ್ಯುನಿಸ್ಟ್ ನಾಯಕ ದಿವಂಗತ ಅಚ್ಯುತಾನಂದನ್‌ಗೆ ಮರಣೋತ್ತರ ಪದ್ಮ ವಿಭೂಷಣ ಸೇರಿ ಕೇರಳಕ್ಕೆ 8 ಪದ್ಮ ಪುರಸ್ಕಾರ ನೀಡಿದೆ.

ತಮಿಳುನಾಡಿಗೆ 13, ಪಶ್ಚಿಮ ಬಂಗಾಳಕ್ಕೆ 11 ಸಾಧಕರಿಗೆ ಪುರಸ್ಕಾರ ನೀಡಿದೆ. ಮಹಾರಾಷ್ಟ್ರಕ್ಕೆ ಅತಿಹೆಚ್ಚು 15 ಮಂದಿ ಸಾಧಕರಿಗೆ ಪದ್ಮ ಗೌರವ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಶೀಘ್ರದಲ್ಲೇ ಬದ್ರಿನಾಥ್, ಕೇದಾರನಾಥ್‌ಗೆ ಹಿಂದೂಯೇತರರ ಪ್ರವೇಶ ನಿಷೇಧ ಸಾಧ್ಯತೆ

ಕಾಂಗ್ರೆಸ್‌ ಡೇಟಾ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್‌ ಚಕ್ರವರ್ತಿ ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಕೇಂದ್ರದ ನಿರ್ಧಾರವನ್ನು ಟೀಕಿಸಿದ್ದಾರೆ. ಇದು ಪದ್ಮ ಪ್ರಶಸ್ತಿಗಳ ಚುನಾವಣೆ. ಮೋದಿ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಸಹ ಚುನಾವಣಾ ಅಸ್ತ್ರವನ್ನಾಗಿ ಪರಿವರ್ತಿಸಿದೆ. ಈ ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ 37% ರಷ್ಟು ಚುನಾವಣಾ ರಾಜ್ಯಗಳಿಂದ ಬಂದವರಾಗಿದ್ದಾರೆ. ಜನಸಂಖ್ಯೆಯಲ್ಲಿ ಅವರ ಪಾಲು ಕೇವಲ 18% ರಷ್ಟಿದೆ. ಈ ಮಾದರಿಯು ನಿರಂತರವಾಗಿ ಪುನರಾವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೋಶ್ಯಾರಿಗೆ ಪದ್ಮಭೂಷಣ ನೀಡಲಾಗಿದೆ. ಇದಕ್ಕೆ ಉದ್ಧವ್ ಠಾಕ್ರೆ ಶಿವಸೇನೆ ವಿರೋಧ ವ್ಯಕ್ತಪಡಿಸಿದೆ. ಕೋಶ್ಯಾರಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಪ್ರಜಾಪ್ರಭುತ್ವ ಹತ್ಯೆ ಮಾಡಿದ್ದಾರೆ ಎಂದು ರಾವತ್ ಆರೋಪಿಸಿದ್ದಾರೆ.

Share This Article