ಬೆಂಗಳೂರಿನ ಐಟಿ ಕಂಪನಿಗಳಿಗೆ ತೆಲಂಗಾಣ ಆಫರ್ – ಬಿಜೆಪಿ ನಾಯಕರು ಕಿಡಿ

Public TV
4 Min Read

ಬೆಂಗಳೂರು: ಮೂಲಭೂತ ಸಮಸ್ಯೆಗಳಿಂದ ಬೆಂಗಳೂರಿನ ಹಲವು ಸಂಸ್ಥೆಗಳು ಬೇರೆ ಕಡೆ ಹೋಗುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದವು. ಇದಕ್ಕೆ ಪ್ರತಿಯಾಗಿ ತೆಲಂಗಾಣ ಸಚಿವ ಕೆಟಿಆರ್ ಕೂಡ ಟ್ವೀಟ್ ಮಾಡಿ ಹೈದರಾಬಾದ್‍ಗೆ ಐಟಿ ಕಂಪನಿಯನ್ನು ಆಹ್ವಾನಿಸಿದ್ದರು. ಇದಕ್ಕೆ ಕೆಪಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದರು. ಇದೀಗ ಬಿಜೆಪಿ ನಾಯಕರು ತೆಲಂಗಾಣಕ್ಕೆ ತಿರುಗೇಟು ನೀಡಿದ್ದಾರೆ.

ಆರಂಭವಾಗಿದ್ದು ಹೇಗೆ?:
ಧರ್ಮ ಸಂಘರ್ಷದ ನಡುವೆ ಅಭಿವೃದ್ಧಿ ಮರೀಚಿಕೆ ಆಗಿರುವ ಬೆಂಗಳೂರಿಂದ ಹಲವು ಸಂಸ್ಥೆಗಳು ಬೇರೆ ಕಡೆ ಹೋಗುತ್ತಿವೆ ಎಂಬ ಆಪಾದನೆ ಇತ್ತೀಚಿಗಷ್ಟೇ ಕೇಳಿಬಂದಿತ್ತು. ಇದಕ್ಕೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿವೆ. ಬೆಂಗಳೂರಿನ ಕೋರಮಂಗಲದ ಸ್ಟಾರ್ಟ್ ಅಪ್ ಕಂಪನಿ ಖಾತಾಬುಕ್ ಸಂಸ್ಥಾಪಕ ರವೀಶ್ ನರೇಶ್, ಐದು ದಿನಗಳ ಹಿಂದೆ ಟ್ವೀಟ್ ಮಾಡಿ, ರಸ್ತೆ, ನೀರು, ಟ್ರಾಫಿಕ್ ಸೇರಿ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಗೋಳು ಹೇಳಿಕೊಂಡು ಪ್ರಧಾನಿ ಮೋದಿ, ರಾಜ್ಯ ಸರ್ಕಾರ, ಸಂಸದ ತೇಜಸ್ವಿ ಸೂರ್ಯಗೆ ಟ್ಯಾಗ್ ಮಾಡಿದ್ದರು.

ಆದರೆ, ಇದಕ್ಕೆ ಇವರ್ಯಾರು ಸ್ಪಂದಿಸಿರಲಿಲ್ಲ. ಬದಲಾಗಿ ರವೀಶ್ ನರೇಶ್ ಟ್ವೀಟ್‍ಗೆ ಸ್ಪಂದಿಸಿದ ತೆಲಂಗಾಣ ಸಚಿವ ಕೆಟಿಆರ್, ನಮ್ಮ ಹೈದರಾಬಾದ್‍ಗೆ ಬನ್ನಿ ಎಂದು ಕೆಂಪು ಹಾಸು ಹಾಸಿದ್ದರು. ಆಗಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.

ಈ ಟ್ವೀಟ್‍ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನಿಮ್ಮ ಚಾಲೆಂಜ್ ಸ್ವೀಕರಿಸುತ್ತೇನೆ. 2023ಕ್ಕೆ ನಮ್ಮದೇ ಸರ್ಕಾರ ಬರುತ್ತದೆ. ಆಗ ಬೆಂಗಳೂರನ್ನು ಮತ್ತೊಮ್ಮೆ ಉತ್ತಮ ನಗರಿಯನ್ನಾಗಿ ರೂಪಿಸ್ತೇನೆ ಎಂದು ಕೆಟಿಆರ್‌ಗೆ ರೀಟ್ವೀಟ್ ಮಾಡಿದರು.

ಇದಕ್ಕೆ ರಿಯಾಕ್ಷನ್ ನೀಡಿದ ಕೆಟಿಆರ್, ನಿಮ್ ರಾಜ್ಯದ ರಾಜಕೀಯ ನಂಗೊತ್ತಿಲ್ಲ. ನಿಮ್ ಪಕ್ಷ ಗೆಲ್ಲುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ. ಆದರೆ, ನಿಮ್ಮ ಚಾಲೆಂಜ್ ಅನ್ನು ನಾನು ತೆಗೆದುಕೊಳ್ತೇನೆ. ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಸೃಷ್ಟಿಯಲ್ಲಿ ಕರ್ನಾಟಕ – ತೆಲಂಗಾಣ ನಡುವೆ ಆರೋಗ್ಯಕರ ಪೈಪೋಟಿ ನಡೆಯಲಿ ಎಂದು ಟ್ವೀಟಿಸಿದ್ದಾರೆ. ಜೊತೆಗೆ ಹಲಾಲ್, ಹಿಜಬ್ ರಾಜಕೀಯ ಬೇಡ ಅಂತಾನೂ ಹೇಳಿದ್ದಾರೆ.

ಈಗ ಎಚ್ಚೆತ್ತ ಸಚಿವರಾದ ಅಶ್ವಥ್‍ನಾರಾಯಣ್ ಮತ್ತು ಸುಧಾಕರ್ ಟ್ವೀಟ್ ಮೂಲಕ ಕೆಟಿಆರ್, ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಬೆಂಗಳೂರು ಜೊತೆ ಸ್ಪರ್ಧಿಸಲು ಯಾವ ನಗರಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ಅಶ್ವಥ್ ನಾರಾಯಣ ಟ್ವೀಟ್ ಮಾಡಿ, ಕರ್ನಾಟಕ ಇತರ ರಾಜ್ಯಗಳೊಂದಿಗೆ ರೇಸ್‍ನಲ್ಲಿಲ್ಲ. ಜಾಗತಿಕ ಮಟ್ಟದಲ್ಲಿ ಸಹಕರಿಸುವುದು ಮತ್ತು ಸ್ಪರ್ಧಿಸುವುದು ನಮ್ಮ ಗಮನ. ದುರದೃಷ್ಟವಶಾತ್, ಕೆಲವು ರಾಜ್ಯಗಳು ಆರೋಗ್ಯಕರ ಸ್ಪರ್ಧೆಯ ಹೆಸರಿನಲ್ಲಿ ನಮ್ಮ ಪ್ರಯಾಣದಲ್ಲಿ ಪಿಗ್ಗಿಬ್ಯಾಕ್ ಮಾಡುತ್ತಿವೆ. ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಮ್ಯಾರಥಾನ್ ಕಾರ್ಯಾಚರಣೆಯಲ್ಲಿದ್ದೇವೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ನಾನು ಮೊದಲಿಗ: ತಿಪ್ಪಾರೆಡ್ಡಿ

ಸುಧಾಕರ್ ಟ್ವೀಟ್ ಮಾಡಿ, ಬೆಂಗಳೂರಿನ ಸ್ಪರ್ಧೆಯು ಇತರ ಭಾರತೀಯ ನಗರಗಳು ಅಥವಾ ರಾಜ್ಯಗಳೊಂದಿಗೆ ಎಂದಿಗೂ ಇರಲಿಲ್ಲ ಎಂದು ನೀವು ತಿಳಿದಿರಬೇಕು. ನಮ್ಮ ಸ್ಪರ್ಧೆಯು ಸಿಲಿಕಾನ್ ವ್ಯಾಲಿ, ಸಿಂಗಾಪುರ್ ಮತ್ತು ಟೆಲ್ ಅವಿವ್‍ನೊಂದಿಗೆ ಇದೆ. ಬೆಂಗಳೂರಿನಲ್ಲಿರುವ ನಾವು ಬಹು ರಾಜ್ಯಗಳು ಮತ್ತು ದೇಶಗಳ ಜನರಿಗೆ ಹೆಮ್ಮೆಯ ಅತಿಥೇಯರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ

ಮುಂದಿನ ಬಾರಿ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ, ಹೈದರಾಬಾದ್ ಕೂಡ ಸ್ಟಾರ್ಟ್-ಅಪ್ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಾಣಲಿದೆ ಮತ್ತು ಆಲ್-ರೌಂಡ್ ಡಬಲ್ ಇಂಜಿನ್ ಬೆಳವಣಿಗೆಯ ನಿಜವಾದ ಫಲವನ್ನು ಅನುಭವಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *