ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

Public TV
2 Min Read

ನವದೆಹಲಿ: ಯುಪಿಎ ರಫೇಲ್ ಡೀಲ್ ಗೆ ಹೋಲಿಕೆ ಮಾಡಿಕೊಂಡರೆ ಎನ್‍ಡಿಎ ಸರ್ಕಾರ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ. ಈ ಮೂಲಕ ರಫೇಲ್ ಖರೀದಿ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ವಿಪಕ್ಷಗಳ ಆರೋಪದಿಂದ ಕೇಂದ್ರ ಸರ್ಕಾರ ಪಾರಾಗಿದೆ.

ರಫೇಲ್ ಜೆಟ್ ಖರೀದಿಯ ಒಡಂಬಡಿಕೆ ಬಗ್ಗೆ 141 ಪುಟಗಳ ವರದಿ ಇಂದು ಮಂಡನೆಯಾಗಿದೆ. 2007ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ 126 ರಫೇಲ್ ವಿಮಾನ ಖರೀದಿಗೆ ಹೋಲಿಸಿದರೆ ಎನ್‍ಡಿಎ ಸರ್ಕಾರ 2016ರಲ್ಲಿ 36 ವಿಮಾನ ಖರೀದಿ ಸಂಬಂಧ ಮಾಡಿಕೊಂಡಿರುವ ಒಪ್ಪಂದ ಶೇ.2.8 ರಷ್ಟು ಅಗ್ಗವಾಗಿದೆ. ಅಷ್ಟೇ ಅಲ್ಲದೇ ಈ ಹೊಸ ಒಪ್ಪಂದದಿಂದಾಗಿ ಭಾರತಕ್ಕೆ ಶೇ.17.08 ರಷ್ಟು ಹಣ ಉಳಿತಾಯವಾಗಿದೆ ಎನ್ನುವ ಅಂಶ ಈ ವರದಿಯಲ್ಲಿದೆ.

ವರದಿಯಲ್ಲಿ ಏನಿದೆ?
2007 ರಲ್ಲಿ ಯುಪಿಎ ಪ್ರಸ್ತಾಪಿಸಿದ್ದ ಖರೀದಿ ಒಪ್ಪಂದಕ್ಕಿಂತ ಎನ್‍ಡಿಎ ಸರ್ಕಾರದ ಒಪ್ಪಂದದಲ್ಲಿ ಶೇ.2.86 ಅಗ್ಗದ ಬೆಲೆಯಲ್ಲಿ ವಿಮಾನ ದೊರೆಯಲಿದೆ. 2007ರ ಗುತ್ತಿಗೆಗೆ ಹೋಲಿಕೆ ಮಾಡಿದರೆ ಎನ್‍ಡಿಎ ಸರ್ಕಾರ ಶೇ.9 ರಷ್ಟು ಅಗ್ಗದ ಬೆಲೆಯಲ್ಲಿ ವಿಮಾನ ಸಿಗಲಿದೆ ಎಂದು ವಾದಿಸಿತ್ತು. ಆದರೆ ಈ ವಾದವನ್ನು ಸಿಎಜಿ ತಿರಸ್ಕರಿಸಿದೆ. ಖರೀದಿ ವೇಳೆ ವಿಮಾನದ 14 ಭಾಗಗಳಿಗೆ ಸಂಬಂಧಿಸಿದಂತೆ ಸರ್ಕಾರ ಮೊದಲೇ ಮೂಲಬೆಲೆಯನ್ನು ಅಂದಾಜಿಸಿತ್ತು. ಈ 14 ಭಾಗಗಳ ಪೈಕಿ 7ರ ಬೆಲೆ ಸರ್ಕಾರ ಅಂದಾಜಿಸಿದ ಬೆಲೆಗಿಂತ ಜಾಸ್ತಿಯಾಗಿದ್ದರೆ, ಮೂಲ ವಿಮಾನ ದರ ಸೇರಿದಂತೆ ಮೂರು ಭಾಗಗಳ ಬೆಲೆ ಸರ್ಕಾರ ಅಂದಾಜಿಸಿದ ದರದಲ್ಲೇ ಇದೆ. 4 ಭಾಗಗಳನ್ನು ಸರ್ಕಾರ ಅಂದಾಜಿಸಿದ ಬೆಲೆಗಿಂತಲೂ ಕಡಿಮೆ ದರದಲ್ಲಿ ಖರೀದಿಸಲಾಗಿದೆ.

ಕಾನೂನು ಸಚಿವಾಲಯದ ಸಲಹೆಯ ಮೇರೆಗೆ ರಕ್ಷಣಾ ಸಚಿವಾಲಯ ಈ ವಿಮಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಗ್ಯಾರಂಟಿ ನೀಡಬೇಕೆಂಬ ಅಪೇಕ್ಷೆಯನ್ನು ಫ್ರಾನ್ಸ್ ಸರ್ಕಾರದ ಮುಂದಿಟ್ಟಿತ್ತು. ಈ ಬೇಡಿಕೆಗೆ ಫ್ರಾನ್ಸ್ ಸರ್ಕಾರ ಪತ್ರದ ಮೂಲಕ ಒಪ್ಪಿಗೆ ನೀಡಿದೆ.

ಯುಪಿಎ ಆಫರ್ ಪ್ರಕಾರ ಒಪ್ಪಂದಕ್ಕೆ ಸಹಿ ಬಿದ್ದ 50 ತಿಂಗಳ ಒಳಗಡೆ 18 ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಉಳಿದ 18 ವಿಮಾನಗಳನ್ನು ಎಚ್‍ಎಎಲ್ ಉತ್ಪಾದಿಸಬೇಕಿತ್ತು. ಗುತ್ತಿಗೆಗೆ ಸಹಿ ಹಾಕಿದ 49 ರಿಂದ 72 ತಿಂಗಳ ಒಳಗಡೆ ಈ 18 ವಿಮಾನಗಳನ್ನು ನೀಡಬೇಕಿತ್ತು. 2016ರ ಗುತ್ತಿಗೆಯ ಪ್ರಕಾರ ಮೊದಲ 18 ವಿಮಾನಗಳು 36 ರಿಂದ 53 ತಿಂಗಳ ಒಳಗಡೆ ಭಾರತಕ್ಕೆ ನೀಡಬೇಕು. ಉಳಿದ 18 ವಿಮಾನಗಳು 67 ತಿಂಗಳ ಒಳಗಡೆ ಹಸ್ತಾಂತರವಾಗಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ ಎನ್ನುವ ಅಂಶ ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

ಅಂದಾಜಿಸಿದ ಬೆಲೆ ಲೆಕ್ಕಾಚಾರ ಹೀಗಿದೆ:
1. ಹಾರಾಟ ಸ್ಥಿತಿಯಲ್ಲಿರುವ ವಿಮಾನ ಬೆಲೆ : ಯಾವುದೇ ಬದಲಾವಣೆ ಇಲ್ಲ
2. ಸೇವೆ, ಉತ್ಪನ್ನ, ಆಪರೇಷನ್ ಸಪೋರ್ಟ್ ಇಕ್ವಿಪ್‍ಮೆಂಟ್(ಒಎಸ್‍ಇ), ಟೆಕ್ನಿಕಲ್ ಸಹಾಯ, ದಾಖಲೀಕರಣ, ಪ್ರೋಗ್ರಾಂ ಮ್ಯಾನೇಜ್‍ಮೆಂಟ್ – ಶೇ.4.77 ಅಗ್ಗ
3. ತಯಾರಿಕೆಯ ಮಾನದಂಡ – ಯಾವುದೇ ಬದಲಾವಣೆ ಇಲ್ಲ
4. ಎಂಜಿನಿಯರಿಂಗ್ ಸಪೋರ್ಟ್ ಪ್ಯಾಕೇಜ್ – ಶೇ.6.54 ದುಬಾರಿ
5. ಲಾಜಿಸ್ಟಿಕ್ಸ್ ಪರ್ಫಾಮೆನ್ಸ್ – ಶೇ.6.54 ದುಬಾರಿ
6. ಟೂಲ್ಸ್, ಟೆಸ್ಟರ್ ಮತ್ತು ಗ್ರೌಂಡ್ ಇಕ್ವಿಪ್‍ಮೆಂಟ್ – ಶೇ.0.15 ದುಬಾರಿ
7. ಆಯುಧಗಳ ಪ್ಯಾಕೇಜ್ – ಶೇ.1.05 ಅಗ್ಗ
8. ಸಲಕರಣೆಗಳು- ಯಾವುದೇ ಬದಲಾವಣೆ ಇಲ್ಲ
9. ಸಿಮ್ಯೂಲೇಟರ್, ವಾರ್ಷಿಕ ನಿರ್ವಹಣೆ- ಯಾವುದೇ ಬದಲಾವಣೆ ಇಲ್ಲ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *