ವನ್ಯಜೀವಿಯಿಂದ ಹಾಡಿಯ ಜಾನುವಾರು ಮೃತಪಟ್ಟರೆ ಪರಿಹಾರ: ಈಶ್ವರ ಖಂಡ್ರೆ

Public TV
2 Min Read

ಬೆಂಗಳೂರು: ರಾಜ್ಯದ ಕೆಲವು ಅರಣ್ಯದೊಳಗೆ ಹಾಡಿಗಳಿದ್ದು, ಇಲ್ಲಿ ವಾಸಿಸುತ್ತಿರುವ ಅರಣ್ಯವಾಸಿಗಳು ಸಾಕಿರುವ ಜಾನುವಾರುಗಳು (Livestock) ವನ್ಯಜೀವಿಗಳಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದ್ದಾರೆ.

ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳೆದ ಜೂನ್‌ನಲ್ಲಿ ಪ್ರತಿಕಾರಕ್ಕಾಗಿ ದನಕ್ಕೆ ಹಾಕಿದ್ದ ವಿಷದಿಂದ 5 ಹುಲಿಗಳು ಮೃತಪಟ್ಟಿದ್ದವು. ಈ ತಿಂಗಳ ಆದಿಯಲ್ಲೇ ಮತ್ತೊಂದು ಹುಲಿ ವಿಷಪ್ರಾಶನದಿಂದ ಮೃತಪಟ್ಟಿದೆ. ಹಾಡಿಯ ಜನರು ಹತಾಶರಾಗಿ, ಪ್ರತಿಕಾರಕ್ಕಾಗಿ ವಿಷ ಹಾಕುವುದನ್ನು ತಡೆಯಲು ಈ ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ರಾಜ್ಯ ಸರ್ಕಾರ – ಪರೀಕ್ಷಾ ಶುಲ್ಕ 710 ರೂ.ವರೆಗೆ ಹೆಚ್ಚಳ

ಮುಖ್ಯಮಂತ್ರಿಗಳಿಗೆ ಹುಲಿ ಸಾವಿನ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅರಣ್ಯದೊಳಗಿನ ಹಾಡಿಯಲ್ಲಿರುವ ಜಾನುವಾರುಗಳು ವನ್ಯಜೀವಿ ದಾಳಿಯಿಂದ ಮೃತಪಟ್ಟರೆ ಪ್ರವಾಹದಲ್ಲಿ ಸಾವಿಗೀಡಾಗುವ ಜಾನುವಾರುಗಳಿಗೆ ನೀಡುವ ಪರಿಹಾರದ ಮೊತ್ತವನ್ನೇ ಈ ಜಾನುವಾರುಗಳಿಗೂ ನೀಡಲು ನಿರ್ಧರಿಸಲಾಗಿದ್ದು, ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ತಾವು ಸಾಕಿದ ಜಾನುವಾರುಗಳು ಮೃತಪಟ್ಟಾಗ ಸಹಜವಾಗಿಯೇ ಆಕ್ರೋಶಕ್ಕೆ ಒಳಗಾಗುತ್ತಾರೆ. ಆದರೆ ವನ್ಯಜೀವಿ ಹತ್ಯೆ ಅಪರಾಧವಾಗಿದ್ದು, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ. ಕಳೆದ 1ರಂದು ನಡೆದ ಹುಲಿ ಹತ್ಯೆಯ 4 ಶಂಕಿತರನ್ನು 48 ಗಂಟೆಯೊಳಗೆ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಈ ಕುಕೃತ್ಯದಲ್ಲಿ ಯಾರೇ ಎಸಗಿದ್ದರೂ ಅವರಿಗೆ ಕಾನೂನು ರೀತಿಯ ತಕ್ಕ ಶಿಕ್ಷೆ ಆಗುತ್ತದೆ. ತ್ವರಿತವಾಗಿ ಶಿಕ್ಷೆ ಆದರೆ ಅದು ಸ್ಪಷ್ಟ ಸಂದೇಶ ರವಾನಿಸುತ್ತದೆ. ಹೀಗಾಗಿ ತ್ವರಿತವಾಗಿ ಚಾರ್ಜ್ ಶೀಟ್ ಸಲ್ಲಿಸಲು ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಯಾದಗಿರಿ | ಸೆಕ್ಸ್‌ಗೆ ಒಪ್ಪದಿದ್ದಕ್ಕೆ ಪತ್ನಿಯ ಭೀಕರ ಕೊಲೆ – ಕೊಡಲಿಯೊಂದಿಗೆ ಪೊಲೀಸರಿಗೆ ಶರಣಾದ ಹಂತಕ

ಒಂದೊಮ್ಮೆ ಹುಲಿ ಹತ್ಯೆ ತಡೆಯುವಲ್ಲಿ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರೆ, ಕರ್ತವ್ಯ ಲೋಪ ಆಗಿದ್ದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುವುದು. ಈಗಾಗಲೇ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ಬಳಿಕ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವೀರಶೈವ-ಲಿಂಗಾಯತರು ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ: ಈಶ್ವರ್‌ ಖಂಡ್ರೆ

Share This Article