ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ಮದುವೆಗಳಿಗೆ (Marriage) ಕಾಮಿಡಿ ಸ್ಟಾರ್ ಚಿಕ್ಕಣ್ಣ (Comedy Star Chikkanna) ಕೂಡ ಸಾಕ್ಷಿ ಆಗುತ್ತಿದ್ದಾರೆ. ಚಿಕ್ಕಣ್ಣನ ಹೊಸ ಜೀವನಕ್ಕೆ ಮಂಡ್ಯದ (Mandya) ಹುಡುಗಿ ಕಾಲಿಡುತ್ತಿದ್ದು, ಸದ್ದಿಲ್ಲದೇ ಹೂ ಮುಡಿಸುವ ಶಾಸ್ತ್ರ ಕೂಡ ಮುಗಿದು ಹೋಗಿದೆ. ಚಿಕ್ಕಣ್ಣನ ಲೈಫ್‌ಗೆ ಎಂಟ್ರಿ ಕೊಟ್ಟಿರೋ ಹುಡುಗಿ ಯಾರು? ಇದು ಅರೇಂಜ್ ಮ್ಯಾರೇಜಾ? ಅಥವಾ ಲವ್ ಮ್ಯಾರೇಜಾ? ಚಿಕ್ಕಣ್ಣ ಬದುಕಿಗೆ ಬಂದ ಮನಮೆಚ್ಚಿದ ಹುಡುಗಿ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಳೆದ ಎರಡ್ಮೂರು ವರ್ಷಗಳಿಂದ ಕಾಮಿಡಿ ಸ್ಟಾರ್ ಚಿಕ್ಕಣ್ಣನ ಮದುವೆ ಸಮಾಚಾರ ಹಲವಾರು ಬಾರಿ ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಎರಡ್ಮೂರು ಬಾರಿ ಚಿಕ್ಕಣ್ಣನ ಮದ್ವೆಯನ್ನೂ ಮಾಡಿಸಿದ್ದಾರೆ. ಹಾಗಾಗಿ ಮದ್ವೆ ವಿಷ್ಯ ತೆಗೆದಾಗೊಮ್ಮೆ ತಪ್ಪಿಸಿಕೊಳ್ಳುತ್ತಿದ್ದರು ಚಿಕ್ಕಣ್ಣ. ಹುಡುಗಿ ಸಿಕ್ಕಾಗ ನೋಡೋಣ ಬಿಡಿ ಅಂತ ಹಾರಿಕೆ ಉತ್ತರವನ್ನೂ ಕೊಡುತ್ತಿದ್ದರು. ಇದೀಗ ಚಿಕ್ಕಣ್ಣನ ಮದ್ವೆ ಫಿಕ್ಸ್ ಆಗಿದೆ. ಸದ್ದಿಲ್ಲದೇ ಹುಡುಗಿಗೆ ಹೂ ಮುಡಿಸುವ ಶಾಸ್ತ್ರವನ್ನೂ ಚಿಕ್ಕಣ್ಣನ ಮನೆಯವರು ಮಾಡಿದ್ದಾರೆ. ಚಿಕ್ಕಣ್ಣನ ಬದುಕಿಗೆ ಮಂಡ್ಯದ ಹುಡುಗಿಯ ಆಗಮನವಾಗಿದ್ದು, ಸಹಜವಾಗಿಯೇ ಚಿಕ್ಕಣ್ಣನ ಮಹಿಳಾ ಫ್ಯಾನ್ಸ್‌ಗೆ ನಿರಾಸೆಯಾಗಿದೆ.
ಮೈಸೂರಿನ ಬಲ್ಲಹಳ್ಳಿಯಲ್ಲಿ ಹುಟ್ಟಿರೋ ಚಿಕ್ಕಣ್ಣ, ಎಸ್‌ಎಸ್‌ಎಲ್‌ಸಿ ನಂತರ ಗಾರೆ ಕೆಲಸ ಮಾಡಿಕೊಂಡಿದ್ದವರು. ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವಿತ್ತು. ಹಾಗಾಗಿ ಆರ್ಕೆಸ್ಟ್ರಾಗಳಲ್ಲಿ ಸೇರಿಕೊಂಡು ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು. ಆರ್ಕೆಸ್ಟ್ರಾದಿಂದ ಕಿರುತೆರೆಗೆ ಆಗಮಿಸಿದ ಚಿಕ್ಕಣ್ಣ, ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಪಡೆದರು. ಯಶ್ ನಟನೆಯ ಕಿರಾತಕ ಸಿನಿಮಾ ಚಿಕ್ಕಣ್ಣಗೆ ದೊಡ್ಡ ಬ್ರೇಕ್ ಕೊಟ್ಟಿತು. ಅಲ್ಲಿಂದ ಅವರು ತಿರುಗಿ ನೋಡಲೇ ಇಲ್ಲ. ಕನ್ನಡದ ಬಹುತೇಕ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದರು. ಹಾಗಾಗಿ ಚಿಕ್ಕಣ್ಣನ ಮದ್ವೆಯ ಬಗ್ಗೆ ಎಲ್ಲರಿಗೂ ಕ್ಯೂರಿಯಾಸಿಟಿ ಇದ್ದೇ ಇತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಸದ್ಯ ಚಿಕ್ಕಣ್ಣನೊಂದಿಗೆ ಹಸೆಮಣೆ ಏರಲಿದ್ದಾರೆ.
ಪಾವನಾರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದರಂತೆ ಚಿಕ್ಕಣ್ಣ. ಆದರೆ, ಇದು ಶುದ್ಧ ಅರೇಂಜ್ ಮ್ಯಾರೇಜ್ ಅಂತಾರೆ ಚಿಕ್ಕಣ್ಣ. ತಮ್ಮ ಕುಟುಂಬಕ್ಕೆ ಪಾವನಾರನ್ನು ಚಿಕ್ಕಣ್ಣ ಅವರೇ ಪರಿಚಯಿಸಿದ್ದರೆ, ಎರಡೂ ಕುಟುಂಬಗಳ ಒಪ್ಪಿಗೆ ಪಡೆದುಕೊಂಡೇ ಈ ಜೋಡಿ ಮದುವೆ ಆಗುತ್ತಿದೆ. ಈಗಾಗಲೇ ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹೂ ಮುಡಿಸುವ ಶಾಸ್ತ್ರ ಮುಗಿದಿದೆ. ಸದ್ಯದಲ್ಲೇ ನಿಶ್ಚಿತಾರ್ಥ ಕೂಡ ನೆರವೇರಲಿದೆಯಂತೆ. ಅಂದುಕೊಂಡಂತೆ ನಡೆದರೆ, ಇದೇ ವರ್ಷವೇ ಚಿಕ್ಕಣ್ಣ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಕಲ್ಯಾಣೋತ್ಸವಗಳ ಭರಾಟೆ ಜೋರಾಗಿದೆ. ಇತ್ತೀಚೆಗಷ್ಟೇ ನಿರೂಪಕಿ ಅನುಶ್ರೀ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಚಿಕ್ಕಣ್ಣನ ಸರದಿ. ಅದ್ಧೂರಿಯಾಗಿಯೇ ಮದುವೆಯಾಗಲು ಪ್ಲ್ಯಾನ್ ಮಾಡಿದ್ದಾರಂತೆ ಚಿಕ್ಕಣ್ಣ. ಬಹುತೇಕ ಮೈಸೂರಿನಲ್ಲೇ ಮದುವೆ ಅಂತಾನೂ ಹೇಳಲಾಗುತ್ತಿದೆ. ಮದುವೆ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಚಿಕ್ಕಣ್ಣ ನೀಡಲಿದ್ದಾರಂತೆ.