ಫಸ್ಟ್‌ ಟೈಂ EVM ನಲ್ಲಿ ಇನ್ಮುಂದೆ ಅಭ್ಯರ್ಥಿಗಳ ಕಲರ್ ಫೋಟೋ – ಬಿಹಾರ ವಿಧಾನಸಭಾ ಚುನಾವಣೆಯಿಂದಲೇ ಆರಂಭ

Public TV
2 Min Read

– ಕೇಂದ್ರ ಚುನಾವಣಾ ಆಯೋಗದಿಂದ ಮಾಹಿತಿ

ಪಾಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Assembly Elections) ದಿನಾಂಕ ಘೋಷಿಸುವ ಮುನ್ನವೇ ಭಾರತೀಯ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನ ಪರಿಷ್ಕರಿಸಿದೆ. ವಿದ್ಯುನ್ಮಾನ ಮತಯಂತ್ರ (EVM) ಮತಪತ್ರಗಳ ವಿನ್ಯಾಸದಲ್ಲಿ ಬದಲಾವಣೆ ತಂದಿದೆ. ಅದರಂತೆ ಅಭ್ಯರ್ಥಿಗಳ ಗುರುತನ್ನು ಸುಲಭವಾಗಿ ಪತ್ತೆಹಚ್ಚಲು ಇನ್ಮುಂದೆ ಇವಿಎಂನಲ್ಲಿ ಕಪ್ಪು-ಬಿಳುಪಿನ ಫೋಟೋ ಬದಲಿಗೆ ಕಲರ್‌ ಫೋಟೋ ಅಳವಡಿಸಲಾಗುತ್ತದೆ.

ಮತದಾರರಿಗೆ (Voters) ಅಭ್ಯರ್ಥಿಗಳ ಚಿತ್ರ ಸ್ಪಷ್ಟವಾಗಿ ಕಾಣಬೇಕೆಂಬುದು ಇದರ ಉದ್ದೇಶವಾಗಿದೆ. ಅಲ್ಲದೇ ಅಭ್ಯರ್ಥಿಗಳ ಸರಣಿ ಸಂಖ್ಯೆಯು 30 ಗಾತ್ರದಷ್ಟು ಫಾಂಟ್‌ನಲ್ಲಿ ಇರಲಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲೇ ಈ ಮಾರ್ಗಸೂಚಿ ಅನ್ವಯವಾಗಲಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಚುನಾವಣೆಗಳಿಗೆ ಅನ್ವಯವಾಗಲಿದೆ. ಚುನಾವಣೆಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಸುಧಾರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ (ECI) ಮಹತ್ವದ ಹೆಜ್ಜೆ ಇದಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 75ರ ಸಂಭ್ರಮ – ಫೋನ್‌ ಕರೆ ಮಾಡಿ ಬರ್ತ್‌ಡೇ ವಿಶ್‌ ಮಾಡಿದ ಟ್ರಂಪ್‌

ಪರಿಷ್ಕರಿಸಿದ ಮಾರ್ಗಸೂಚಿಯಲ್ಲಿ ಏನಿದೆ?
* ಚುನಾವಣಾ ನೀತಿ ನಿಯಮಗಳು, 1961ರ ನಿಯಮ 49B ಅಡಿಯಲ್ಲಿ, ಅಭ್ಯರ್ಥಿಗಳ ಫೋಟೋವನ್ನು ಸುಲಭವಾಗಿ ಗುರುತಿಸಲು ನೆರವಾಗಬೇಕು. ಅದಕ್ಕಾಗಿ ಹಿಂದಿನ ಕಪ್ಪು-ಬಿಳುಪು ಅಥವಾ ಫೋಟೋ ರಹಿತ ಆವೃತ್ತಿಗಳನ್ನು ಬದಲಾಯಿತಿ ಕಲರ್‌ ಫೋಟೋಗಳನ್ನು ಮುದ್ರಿಸಲಾಗುತ್ತದೆ.

* ಫೋಟೋ ನಿಗದಿಪಡಿಸಿದ ಸ್ಥಳದ ಮುಕ್ಕಾಲು ಭಾಗದಷ್ಟು ಅಂದ್ರೆ ನಾಲ್ಕನೇ ಮೂರು ಭಾಗ ಇರುತ್ತದೆ. ಇದರಿಂದ ಮತದಾರರು ಅಭ್ಯರ್ಥಿಗಳ ಮುಖವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

* ಅಲ್ಲದೇ ಮತಪತ್ರದಲ್ಲಿ ಅಭ್ಯರ್ಥಿಗಳ ಸರಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲು ಒತ್ತು ನೀಡಲಾಗಿದೆ. ಅದಕ್ಕಾಗಿ ಅಕ್ಷರ ಗಾತ್ರವು 30 ಫಾಂಟ್‌ ಗಾತ್ರದಲ್ಲಿ ಮುದ್ರಿಸಲಾಗುತ್ತದೆ. ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ ಅಭ್ಯರ್ಥಿಗಳ ಅಥವಾ ನೋಟಾ ಹೆಸರುಗಳನ್ನು ಒಂದೇ ಫಾಂಟ್‌ನಲ್ಲಿ ಮತ್ತು ಸುಲಭವಾಗಿ ಓದಲು ಸಾಧ್ಯವಾಗುವಂತೆ ಮುದ್ರಿಸಲಾಗುತ್ತದೆ. ಈ ಹಿಂದಿನ ಮಾರ್ಗಸೂಚಿಯಲ್ಲಿ ಅಭ್ಯರ್ಥಿಯ ಹೆಸರು, ಪಕ್ಷದ ಚಿಹ್ನೆ ಮತ್ತು ಸರಣಿ ಸಂಖ್ಯೆಯಂತಹ ಮೂಲಭೂತ ವಿವರಗಳು ಮಾತ್ರ ಅಗತ್ಯವಿರುತ್ತಿತ್ತು. ಫೋಟೋಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿರಲಿಲ್ಲ. ಫೋಟೋ ಗಾತ್ರವೂ ಚಿಕ್ಕದಾಗಿರುತ್ತಿತ್ತು.

* ಇನ್ನೂ ಇವಿಎಂ ಬ್ಯಾಲೆಟ್ ಪೇಪರ್‌ಗಳನ್ನು 70 ಜಿಎಸ್‌ಎಂ ಪೇಪರ್‌ನಲ್ಲಿ ಮುದ್ರಿಸಲಾಗುತ್ತದೆ. ವಿಧಾನಸಭಾ ಚುನಾವಣೆಗಳಿಗೆ ಗುಲಾಬಿ ಬಣ್ಣದ ಪೇಪರ್ ಅನ್ನು ಬಳಸಲಾಗುತ್ತದೆ.

ಒಟ್ನಲ್ಲಿ ಚುನಾವಣಾ ಪ್ರಕ್ರಿಯೆ ಸುಗಮಗೊಳಿಸುವ ಜೊತೆಗೆ ಮತದಾರರ ಅನುಕೂಲತೆ ಹೆಚ್ಚಿಸಲು ಕಳೆದ 6 ತಿಂಗಳ ಕಾಲ ಚುನಾವಣಾ ಆಯೋಗ ತೆಗೆದುಕೊಂಡ 28 ಉಪಕ್ರಮಗಳಿಗೆ ಅನುಗುಣವಾಗಿ ಈ ಉಪಕ್ರಮಗಳನ್ನು ಮಾರ್ಗಸೂಚಿಯಲ್ಲಿ ತರಲಾಗಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿಯ AI ವಿಡಿಯೋ ತೆಗೆದುಹಾಕಿ: ಕಾಂಗ್ರೆಸ್‌ಗೆ ಪಾಟ್ನಾ ಹೈಕೋರ್ಟ್ ಸೂಚನೆ

Share This Article