ಬೆಂಗಳೂರಲ್ಲಿ ಡಿ.6ಕ್ಕೆ ದಿಲ್ಜಿತ್ ಶೋ; ಅಕ್ರಮ ಟಿಕೆಟ್‌ ಮಾರಾಟ ಆರೋಪ – ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ED ದಾಳಿ

Public TV
1 Min Read

ನವದೆಹಲಿ: ಬೆಂಗಳೂರಿನಲ್ಲಿ ಇದೇ ಡಿಸೆಂಬರ್‌ 6 ರಂದು ದಿಲ್ಜಿತ್‌ ದೋಸಾಂಜ್‌ ಅವರ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ಟಿಕೆಟ್‌ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ದೇಶದ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕೋಲ್ಡ್‌ಪ್ಲೇ ಮತ್ತು ದಿಲ್‌ಜೀತ್ ದೋಸಾಂಜ್‌ ಅವರ ‘ದಿಲ್-ಲುಮಿನಾಟಿ’ ಬಹುನಿರೀಕ್ಷಿತ ಸಂಗೀತ ಕಛೇರಿಯ ಟಿಕೆಟ್‌ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ, ದೆಹಲಿ, ಮುಂಬೈ, ಜೈಪುರ, ಚಂಡೀಗಢ ರಾಜ್ಯಗಳಲ್ಲಿ ಜಾರಿ ನಿರ್ದೇಶನಾಲಯ (ED) ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ.

ಅಕ್ರಮ ಟಿಕೆಟ್ ಮಾರಾಟದ ಬಗ್ಗೆ ವಿವಿಧ ರಾಜ್ಯಗಳಲ್ಲಿ ಅನೇಕ ಎಫ್‌ಐಆರ್‌ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕೋಲ್ಡ್‌ಪ್ಲೇ ಅವರ (ಬ್ರಿಟಿಷ್‌ ರಾಕ್‌ ಬ್ಯಾಂಡ್‌) ‘ಮ್ಯೂಸಿಕ್ ಆಫ್ ದಿ ಸ್ಪಿಯರ್ಸ್ ವರ್ಲ್ಡ್ ಟೂರ್’ ಸಂಗೀತ ಕಾರ್ಯಕ್ರಮವು ನ.18, 19, 21 ರಂದು ಮುಂಬೈನಲ್ಲಿ ನಡೆಯಲಿದೆ. ಜೊತೆಗೆ ದಿಲ್ಜೀತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ಡಿ.6 ರಂದು ನಡೆಯಲಿದೆ. ಜನಪ್ರಿಯ ಶೋಗಳಿಗೆ ಟಿಕೆಟ್‌ ಬೇಡಿಕೆ ಹೆಚ್ಚಾಗಿದ್ದು, ಬುಕ್‌ಮೈಶೋ ಮತ್ತು ಜೊಮ್ಯಾಟೊ ಲೈವ್‌ನಂತಹ ಅಧಿಕೃತ ವೇದಿಕೆಗಳಲ್ಲಿ ಟಿಕೆಟ್‌ಗಳ ತ್ವರಿತ ಮಾರಾಟಕ್ಕೆ ಕಾರಣವಾಯಿತು. ಆದರೆ, ಕೆಲವರು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಟಿಕೆಟ್‌ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಬುಕ್‌ಮೈಶೋ ಹಲವಾರು ಶಂಕಿತರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಕೆಲವರು ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಐದು ರಾಜ್ಯಗಳಾದ್ಯಂತ 13 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. ಅಕ್ರಮದಲ್ಲಿ ಬಳಸಲಾದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

Share This Article