ಡಿಕೆಶಿ ಜೊತೆ ಸಿದ್ದರಾಮಯ್ಯ ಸಂಧಾನ-‘ಟಗರು’ ರಾಜಿ ಆಫರ್​ಗೆ ‘ಬಂಡೆ’ ಉತ್ತರ

Public TV
1 Min Read

-ಮೂರು ವಿಷಯಗಳಲ್ಲಿ ಇಬ್ಬರ ಮಧ್ಯೆ ಮುನಿಸು

ಬೆಂಗಳೂರು: ಕರ್ನಾಟಕ ಉಪಚುನಾವಣೆಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಚುನಾವಣಾ ಕಣದಿಂದ ಕಾಂಗ್ರೆಸ್ ಹಿರಿಯ ನಾಯಕರು ಅಂತರ ಕಾಯ್ದುಕೊಳ್ಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರ ಮೇಲಿನ ಮುನಿಸನ್ನು ಹೊರ ಹಾಕಿದ್ದರು. ಉಪ ಚುನಾವಣೆ ಫಲಿತಾಂಶ ಕ್ರೆಡಿಟ್ ಸಿದ್ದರಾಮಯ್ಯನವರು ಬೇಕಾದರೆ ತೆಗೆದುಕೊಳ್ಳುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಪ್ತರಿಗೆ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ ಎಂದು ಹಿರಿಯ ನಾಯಕರು ಅಸಮಾಧಾನ ಹೊರ ಹಾಕಿದ್ದರು ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಜೊತೆ ಸಂಧಾನಕ್ಕೆ ಮುಂದಾಗಿದ್ದಾರೆ. ಏಕಾಂಗಿ ಆಗುವ ಭೀತಿಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮೂಲಕ ಸಂದೇಶವೊಂದನ್ನು ಡಿಕೆ ಶಿವಕುಮಾರ್ ಅವರಿಗೆ ರವಾನಿಸಿದ್ದಾರಂರೆ. ಪಕ್ಷದಲ್ಲಿಯ ಮನಸ್ತಾಪಗಳು ಏನೇ ಇರಲಿ. ಕುಳಿತು ಮಾತಾಡೋಣ ಎಂಬ ಸಿದ್ದರಾಮಯ್ಯನವರ ಸಂದೇಶಕ್ಕೆ ಸಮಯ ಬಂದಾಗ ನೋಡೋಣ, ಅವಸರ ಬೇಡ ಎಂದು ಡಿಕೆ ಶಿವಕುಮಾರ್ ಟಕ್ಕರ್ ನೀಡಿದ್ದಾರೆ ಎನ್ನಲಾಗಿದೆ.

ಮೂರು ವಿಷಯ:
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರ ಮಧ್ಯೆ ಮೂರು ವಿಷಯಗಳಿಗೆ ಮನಸ್ತಾಪ ಉಂಟಾಗಿದೆ ಎನ್ನಲಾಗಿದ್ದು, ಇದರ ಪರಿಣಾಮವೇ ಡಿಕೆಶಿ ಸಂಧಾನಕ್ಕೆ ಹಿಂದೇಟು ಹಾಕಿರುವ ಸಾಧ್ಯತೆಗಳಿವೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಯ್ತು. ನಂತರ ನಾನು ಜೈಲಲ್ಲಿದ್ದಾಗಲೇ ಏಕಪಕ್ಷೀಯವಾಗಿ ಉಪ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಾಗಿದೆ. ಮೂರನೇಯದ್ದು ಆಪರೇಷನ್ ಕಮಲದ ವೇಳೆ ಬೇರೆ ಪಕ್ಷದ ಅಭ್ಯರ್ಥಿ ಸೆಳೆಯಲು ಯತ್ನಿಸಿದಾಗ ಸಿದ್ದರಾಮಯ್ಯ ಅಡ್ಡಿಪಡಿಸಿದರು ಎಂದು ಡಿಕೆ ಶಿವಕುಮಾರ್ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *