ಬಿಎಸ್‍ವೈ, ಡಿಕೆಶಿ ನಡುವಿನ ರಾಜಕೀಯ ಜಂಗಿ ಕುಸ್ತಿಯ ಇಂಟರೆಸ್ಟಿಂಗ್ ಕಹಾನಿ

Public TV
1 Min Read

ಬೆಂಗಳೂರು: ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ, ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆತ್ಮೀಯ ಗೆಳೆಯರು. ರಾಜಕೀಯ ಹೊರತಾಗಿ ಇಬ್ಬರು ನಾಯಕರು ಒಳ್ಳೆಯ ಗೆಳೆಯರು ಎಂಬುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಇದೀಗ ಡಿಕೆ ಶಿವಕುಮಾರ್ ಒಂದು ಕಾಲದ ಗೆಳೆಯ ಯಡಿಯೂರಪ್ಪರ ಪುತ್ರನನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರೆ.

ಈ ಬಾರಿಯ ಶಿವಮೊಗ್ಗದ ಅಖಾಡದಲ್ಲಿ ಯುಡಿಯೂರಪ್ಪ ಅವರ ಪುತ್ರ ರಾಘವೇಂದ್ರರನ್ನ ಮಣಿಸಲು ಡಿ.ಕೆ.ಶಿವಕುಮಾರ್, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪರಿಗೆ ದೊಡ್ಡ ಮಟ್ಟದ ಬೆಂಬಲ ನೀಡಲು ಮುಂದಾಗಿದ್ದಾರೆ. ಬುಧವಾರ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸಿದ ಡಿಕೆ ಶಿವಕುಮಾರ್ ಕೊನೆಯ ಮೂರು ದಿನ ಶಿವಮೊಗ್ಗದಲ್ಲೇ ಇದ್ದು ಗೆಲುವಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ಏಪ್ರಿಲ್ 18 ಕ್ಕೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮುಗಿಯಲಿದೆ. ಎರಡನೇ ಹಂತದ ಚುನಾವಣೆ ಏಪ್ರಿಲ್ 23 ಕ್ಕೆ ನಡೆಯಲಿದ್ದು, ಶಿವಮೊಗ್ಗ ಚುನಾವಣೆ ಎರಡನೆ ಹಂತದಲ್ಲಿ ನಡೆಯಲಿದೆ.

ಏಪ್ರಿಲ್ 18ರ ಮೊದಲ ಹಂತದ ಚುನಾವಣೆ ಬಳಿಕ ಮೂರು ದಿನಗಳ ಕಾಲ ಶಿವಮೊಗ್ಗದಲ್ಲಿ ಇದ್ದು ಮಧು ಬಂಗಾರಪ್ಪ ಪರವಾಗಿ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬಳ್ಳಾರಿ ಉಪಚುನಾವಣೆ ಗೆದ್ದ ಮಾದರಿಯಲ್ಲೇ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಗೆಲ್ಲುವ ರಣತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಬೇರೆ ಬೇರೆ ಪಕ್ಷದಲ್ಲಿದ್ದರು ಪರಸ್ಪರ ಗಳಸ್ಯ ಗಂಟಸ್ಯ ಸ್ನೇಹ ಹೊಂದಿರುವ ಯಡಿಯೂರಪ್ಪನವರ ತವರಿನಲ್ಲಿ ಅವರ ಮಗನನ್ನ ಸೋಲಿಸಲು ಡಿ.ಕೆ.ಶಿವಕುಮಾರ್ ಹಠಕ್ಕೆ ಬಿದ್ದಿದಾರೆ. ಬೇರೆ ಬೇರೆ ನೆಲೆಯಲ್ಲಿ ನಿಂತು ರಾಜಕಾರಣ ಮಾಡಿದ್ದರೂ, ಪರಸ್ಪರ ಒಬ್ಬರನ್ನೊಬ್ಬರ ಹಿತವನ್ನು ಕಾಯ್ದುಕೊಂಡೆ ಬಂದಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಡಿಕೆ ಶಿವಕುಮಾರ್ ಜೆಡಿಎಸ್ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಕೆಲವು ದಿನಗಳ ಹಿಂದೆ ಯಡಿಯೂರಪ್ಪರ ಡೈರಿ ಪ್ರಕರಣದಲ್ಲೂ ಡಿ.ಕೆ.ಶಿವಕುಮಾರ್ ಹೆಸರು ಕೇಳಿ ಬಂದಿತ್ತು. ಈಗ ಬಿಎಸ್‍ವೈ ರಾಜಕೀಯ ಅಸ್ತಿತ್ವವನ್ನೆ ಅಲ್ಲಾಡಿಸುವ ಹಂತಕ್ಕೆ ಡಿಕೆಶಿ ಅಬ್ಬರಿಸುತ್ತಿದ್ದಾರೆ. ಕೊನೆಯ ಮೂರು ದಿನದ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ಪಾನ್ ಯಶಸ್ವಿಯಾಗಿ ಮೂವ್ ಆಗುತ್ತಾ? ಇಲ್ಲಾ ಯಡಿಯೂರಪ್ಪ ಚೆಕ್ ಮೆಟ್ ಕೊಡ್ತಾರಾ ಅನ್ನೋದು ಸದ್ಯದ ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *