ಕೊಡಗಿನಲ್ಲಿ ವರ್ಷದ ಫಸಲನ್ನು ನಿರ್ಧರಿಸುವ ಕಾಫಿ ಮೊಗ್ಗು ಸಿದ್ಧ- ಬೆಳೆಗಾರರಲ್ಲಿ ಸಂತಸ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಯ ಸುತ್ತ-ಮುತ್ತಲ ಗ್ರಾಮಗಳಲ್ಲಿ ವರ್ಷದ ಫಸಲನ್ನು ನಿರ್ಧರಿಸುವ ಕಾಫಿ ಮೊಗ್ಗು ಸಿದ್ಧವಾಗಿದ್ದು, ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.

ಕೊಡಗು ಜಿಲ್ಲೆ ಸೇರಿದಂತೆ ಈಗಾಗಲೇ ಹಲವೆಡೆ ಅಲ್ಲಲ್ಲಿ ಕೊಂಚ ಮಳೆಯಾಗುತ್ತಲಿದ್ದು, ಕೆಲವು ಬೆಳೆಗಾರರು ಹೂ ಮಳೆ ಸುರಿಯುವ ಮುನ್ನ ತುಂತುರು ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ. ವರ್ಷದ ಫಸಲನ್ನು ನಿರ್ಧರಿಸುವ ಮೊಗ್ಗುಗಳು ಈಗಾಗಲೇ ಜಿಲ್ಲೆಯ ಕಾಫಿ ತೋಟಗಳಲ್ಲಿ ಅರಳಿ ಸುವಾಸನೆಯ ಪರಿಮಳವನ್ನು ಬೀರುತ್ತಿದ್ದು ವಾಹನ ಸವಾರರು ರಸ್ತೆಯ ಬದಿಯ ತೋಟಗಳಲ್ಲಿ ಕಂಗೊಳಿಸುತ್ತಿರುವ ಕಾಫಿ ಹೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಕೊಡಗಿನಲ್ಲಿ ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಬರುವ ಮಳೆಯನ್ನು ಕಾಫಿ ಹೂಮಳೆ ಎಂದು ಕರೆಯುತ್ತಾರೆ. ಕಾಫಿ ಕೊಯ್ಲು ಪೂರೈಸಿರುವ ಕೆಲವು ತೋಟಗಳಲ್ಲಿ ಕಾಫಿಯ ಹೂ ಅರಳಿ ಘಮ ಘಮಿಸುತ್ತಿದೆ. ಈ ಕಾಫಿ ಹೂ ಘಮಘಮಿಸಬೇಕಾದರೆ ಫಸಲು ತೆಗೆದ ನಂತರ ಗಿಡಗಳಿಗೆ ಮಳೆ ಹನಿಯ ಸಿಂಚನವಾದರೆ ಇತರೆ ಹೂಗಳೂ ನಾಚುವಂತೆ ಕಾಫಿ ಹೂ ಕೂಡ ಅರಳಿ ಪರಿಮಳವನ್ನು ಸೂಸುತ್ತದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದ ಕಾರಣ ಹೂಗಳು ಅರಳಿ ಘಮ ಘಮಿಸುತ್ತಿದೆಯಾದೆ. ಆದ್ರೆ ಕೆಲ ಕಾಫಿ ತೋಟಗಳಲ್ಲಿ ಬೆಳೆಗಾರರು ತಾವೇ ಗಿಡಗಳಿಗೆ ನೀರನ್ನು ಸಿಂಪಡಿಸಿ ಹೂ ಅರಳುವಂತೆ ಮಾಡಿದ್ದಾರೆ.

ಸಾಮಾನ್ಯವಾಗಿ ಕಾಫಿಗೆ ಅತಿ ಮುಖ್ಯವಾದ ಹೂ ಅರಳಿಸುವ ಬೇಸಿಗೆ ಕಾಲದ ಮಳೆ ಮಾರ್ಚ್, ಏಪ್ರಿಲ್‍ನಲ್ಲಿ ಬೀಳುತ್ತದೆ. ಹೂ ಮಳೆ ಬೀಳುವುದು ಸಾಧಾರಣವಾಗಿ ಮಾರ್ಚ್ ತಿಂಗಳಿನಲ್ಲಿ ಬೀಳುವುದು ವಾಡಿಕೆ. ತಡವಾದರೆ, ಕಾಫಿ ಉತ್ಪಾದನೆಗೆ ತೀವ್ರ ಹಿನ್ನೆಡೆಯಾಗುತ್ತದೆ. ತಗ್ಗು ಪ್ರದೇಶದಲ್ಲಿ ಅತ್ಯಂತ ಕಡಿಮೆ ನೆರಳಿನಲ್ಲಿ ಬೆಳೆಯುವ ರೋಬಷ್ಟ ಕಾಫಿಗೆ ಫೆಬ್ರವರಿ ತಿಂಗಳಿನಲ್ಲಿ ಮಳೆಯಾದರೆ ಉತ್ತಮ. ನೀರಿನ ಸೌಲಭ್ಯ ಹೊಂದಿರುವ ಬೆಳೆಗಾರರು ಫೆಬ್ರವರಿ ತಿಂಗಳಿನಲ್ಲಿಯೇ ಕಾಫಿ ಹೂ ಅರಳಿಸುವ ಪ್ರಕ್ರಿಯೆಗೆ ಮುಂದಾಗುತ್ತಾರೆ. ಹೂವಿನ ಮಕರಂದವನ್ನು ಸವಿಯಲು ಜೇನು ನೊಣಗಳು ಕೂಡ ಹೆಚ್ಚಾಗಿ ಕಾಫಿ ತೋಟಗಳಲ್ಲಿ ಅಡ್ಡಾಡುವುದರಿಂದ ಜೇನು ಕೃಷಿಯನ್ನು ಕೂಡ ಈ ಸಮಯದಲ್ಲಿ ಸುಲಭವಾಗಿ ಮಾಡಬಹುದಾಗಿದೆ.

ಕಾಫಿಯ ಕಣಜ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿ ಕಾಫಿಗೆ ಪೂರಕವಾಗಿ ವಾತಾವರಣದ ತೇವಾಂಶದಿಂದ ಹಾಗೂ ಚಳಿಗಾಲದಲ್ಲಿ ರಾತ್ರಿಯಿಡೀ ಸುರಿಯುವ ಇಬ್ಬನಿಯಿಂದಾಗಿ ಗಿಡದಲ್ಲಿ ಕಾಫಿ ಮೊಗ್ಗುಗಳಾಗುತ್ತಿದ್ದು, ಕಾಫಿ ಹೂ ಪರಿಮಳದೊಂದಿಗೆ ಹೂವಿನ ಪ್ರಮಾಣ ನೋಡಿಯೇ ಆಯಾಯ ವರ್ಷದ ಫಸಲನ್ನು ಕಾಫಿ ಬೆಳೆಗಾರರು ಲೆಕ್ಕ ಹಾಕುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *