ತೆಂಗಿನಕಾಯಿ ತದ್ರೂಪಿ ಸೃಷ್ಠಿ ಯತ್ನ ಯಶಸ್ವಿ

Public TV
1 Min Read

ತಿರುವನಂತಪುರಂ: ತೆಂಗಿನಕಾಯಿಯನ್ನು ಕಲ್ಪತರು ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯ ಮರದಿಂದ ಹಿಡಿದು ತೆಂಗಿನಕಾಯಿಯ ಸಿಪ್ಪೆಯವರೆಗೂ ಮನುಷ್ಯ ತನ್ನ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾನೆ. ಇದರ ಕುರಿತಾಗಿ ವಿಜ್ಞಾನಿಗಳು ಸಂಶೋಧನೆಯೊಂದನ್ನು ಮಾಡಿದ್ದಾರೆ. ಜಗತ್ತಿನಲ್ಲಿ ಮೊದಲ ಬಾರಿಗೆ ತೆಂಗಿನ ಮರದ ತದ್ರೂಪಿ ಸೃಷ್ಠಿಸುವಲ್ಲಿ ಬೆಲ್ಜಿಯಂನ ಜೀವಶಾಸ್ತ್ರ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಬೆಲ್ಜಿಯಂನ ಸಾಧನೆ: ತೆಂಗಿನ ಬೀಜವು ಒಂದೇ ಮೊಳಕೆಯೊಡೆದು ರೆಂಬೆಗಳಿಲ್ಲದೆ ನೇರವಾಗಿ ಬೆಳೆಯುವುದರಿಂದ ತದ್ರೂಪಿ ಸೃಷ್ಠಿ ಸಾಧ್ಯವಾಗಿರಲಿಲ್ಲ. ಹೊಸ ಕಸಿ ವಿಧಾನದ ಮೂಲಕವಾಗಿ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ. ಈ ವಿಧಾನದಿಂದ ಒಂದೇ ಬೀಜದಿಂದ ಹಲವು ತೆಂಗಿನ ಸಸಿಗಳನ್ನು ತಯಾರಿಸ ಬಹುದಾಗಿದೆ. ಇದರಿಂದ ರೈತರಿಗೆ ತೆಂಗಿನ ತೋಟಕ್ಕೆ ಮಾಡುವ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ:  ವರುಣನ ಆರ್ಭಟಕ್ಕೆ ಬೆಳೆ ಹಾನಿ ಭೀತಿ – ಕೋಲಾರದಲ್ಲಿ ತೋಟದಲ್ಲೇ ಕೊಳೆಯುತ್ತಿವೆ ಟೊಮೆಟೋ

ಕಸಿ ಮಾಡುವ ಮೂಲಕವಾಗಿ ತೆಂಗಿನ ತದ್ರೂಪಿ ಸೃಷ್ಠಿಸುವುದು ಹಾಗೂ ತೆಂಗಿನ ತಳಿಗಳನ್ನು ರಕ್ಷಿಸುವ ವಿಧಾನ ಇದಾಗಿದ್ದು, ತೆಂಗಿನ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಇದರಲ್ಲಿ ಪರಿಹಾರ ಅಡಗಿದೆ. ಈ ತಂತ್ರಜ್ಞಾನ ಜನಸಾಮಾನ್ಯರ ಬಳಕೆಗೆ ಯಾವಾಗ ಸಿಗುತ್ತದೆ ಎನ್ನುವುದರ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ – ರಾಜ್ಯಾದ್ಯಂತ ಅಬ್ಬರಿಸ್ತಿದೆ ಮಳೆ

ಬೆಲ್ಜಿಯಂನ ಕೆ.ಯು ಲೀವನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ತದ್ರೂಪಿ ಸೃಷ್ಠಿಯ ಮೂಲಕ ತೆಂಗಿನ ಸಸಿಗಳು ಬೇಗ ಬೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತೆಂಗಿನ ವಂಶವಾಯಿ ಗುಣಗಳನ್ನು ದೀರ್ಘಾವಧಿಗೆ ಸಂರಕ್ಷಿಸಿಡುವ ವಿಧಾನವನ್ನೂ ಕಂಡುಹಿಡಿದಿದ್ದು, ಇದರಿಂದ ಭಾರತ ಮುಂತಾದ ದೇಶಗಳಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿರುವ ಹಳದಿರೋಗ, ಹವಾಮಾನ ಬದಲಾವಣೆ, ಸಮುದ್ರ ಮಟ್ಟದ ಏರುವಿಕೆ ಹಾಗೂ ತೆಂಗಿನ ತೋಟಗಳು ಹಳೆಯದಾಗಿರುವುದು ಮುಂತಾದ ಸಮಸ್ಯೆಗೆ ಪರಿಹಾರ ಲಭಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *