ದೇಶದಲ್ಲಿಯೇ ಗರಿಷ್ಠ – ಪುತ್ತೂರು, ಬೆಳ್ತಂಗಡಿ, ಕಾರವಾರದಲ್ಲಿ ಉಷ್ಣಾಂಶ ಏರಿಕೆ

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲಿಯೇ ತಾಪಮಾನ (Temperature) ಹೆಚ್ಚಾಗುತ್ತಿದೆ. ಅದರಲ್ಲೂ ಕರಾವಳಿ ಭಾಗ ಕಾದ ಕಾವಲಿಯಂತಾಗಿದೆ. ಬುಧವಾರ ದೇಶದಲ್ಲಿಯೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ (Dakshina Kannada) ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ದಾಖಲಾಗಿದೆ.

ದಕ್ಷಿಣ ಕನ್ನಡದ ಕಡಬ (Kadaba) ಮತ್ತು ಉಪ್ಪಿನಂಗಡಿಯಲ್ಲಿ (Uppinangady) ತಾಪಮಾನ 40.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬುಧವಾರ, ಗುರುವಾರಕ್ಕೆ ಹೋಲಿಸಿದರೆ ಇಂದು ತಾಪಮಾನ ಸ್ವಲ್ಪ ಕಡಿಮೆ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ 38 ಡಿಗ್ರಿ ಸೆಲ್ಶಿಯಸ್‍ನಿಂದ 40 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತಿದೆ.

ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ಮತ್ತು ಕಾರವಾರದಲ್ಲಿ 39 ಡಿಗ್ರಿಗೂ ಹೆಚ್ಚು ಉಷ್ಣಾಂಶ ಕಂಡುಬಂದಿದೆ. ಕರಾವಳಿ ಕರ್ನಾಟಕದಲ್ಲಿ ಮಾರ್ಚ್ 15ರವರೆಗೂ ಸಾಮಾನ್ಯಕ್ಕಿಂತ ಅಧಿಕ ಉಷ್ಣಾಂಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಭಾಗದಲ್ಲಿ ತಾಪಮಾನ ವಾಡಿಕೆಗಿಂತ 4 ರಿಂದ 6 ಡಿಗ್ರಿ ಸೆಲ್ಶಿಯಸ್ ಹೆಚ್ಚು ಇರಲಿದೆ. ಸ್ವಲ್ಪ ನೆಮ್ಮದಿಯ ವಿಚಾರ ಅಂದರೆ ಮಾರ್ಚ್ 16 ರಿಂದ ಮಾರ್ಚ್ 22ರವರೆಗೂ ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಲಿದೆ. ಆದರೆ ಇದು ತಾತ್ಕಾಲಿಕವಾಗಿದ್ದು ಏಪ್ರಿಲ್ ಹೊತ್ತಿಗೆ ಬಿಸಿ ಗಾಳಿಯ (Heat Wave) ಪ್ರಮಾಣ ಜಾಸ್ತಿಯಾಗಲಿದೆ. ಬೆಂಗಳೂರಿನ ತಾಪಮಾನ ಏಪ್ರಿಲ್‍ನಲ್ಲಿ 35 ಡಿಗ್ರಿ ದಾಟುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜನ ಛತ್ರಿಗಳ ಮೊರೆ ಹೋಗಿದ್ದಾರೆ. ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಕುಡಿದು ದೇಹವನ್ನು ತಂಪಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ಮೋಡದ ವಾತಾವರಣ ಇಲ್ಲದಿರುವ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಸುಡು ಬಿಸಿಲಿನ ಅನುಭವವಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತಿದೆ. ಇದರ ಜೊತೆ ಕರಾವಳಿಯಲ್ಲಿ ಸಮುದ್ರದ ನೀರು ಬಿಸಿಯಾಗಿ ವಾತವರಣದಲ್ಲಿ ಬಿಸಿ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

ಕರಾವಳಿಯಲ್ಲಿ ಗುರುವಾರ ಹಾಗೂ ಶುಕ್ರವಾರ ಉಷ್ಣ ಅಲೆಯ ಮುನ್ನೆಚ್ಚರಿಕೆ ನೋಡಿದ್ದೇವೆ. ಉಡುಪಿ,ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಈ ಮುನ್ನೆಚ್ಚರಿಕೆ ಇದೆ. ಗರಿಷ್ಠ ಉಷ್ಣಾಂಶ 4-5 ಡಿಗ್ರಿಯಷ್ಟು ಹೆಚ್ಚು ವರದಿಯಾಗಿತ್ತು. ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಮಾರ್ಚ್‌ನಲ್ಲಿ ಹೆಚ್ಚು ಉಷ್ಣಾಂಶ ಬಂದಿರುವುದು ಬಹಳ ಅಪರೂಪ. ಇದು ತಾತ್ಕಾಲಿಕವಾಗಿದ್ದು ಮುಂದಿನ ನಾಲ್ಕು ಹಾಗೂ ಐದನೇ ದಿನ ಕೆಲವೆಡೆ ಮಳೆಯಾಗಬಹುದು. ಮಾ.14, 15 ರಂದು  ಮೂರು ಜಿಲ್ಲೆಗಳು ಅಂದರೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಹಗಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವಿಜ್ಞಾನಿ ಪ್ರಸಾದ್‌ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *