ಏ.20ರ ನಂತ್ರ ಪಾಸ್ ಇಲ್ಲದೆ ಬೈಕ್‍ಗಳ ಓಡಾಟಕ್ಕೆ ಅವಕಾಶ: ಸಿಎಂ ಬಿಎಸ್‍ವೈ

Public TV
2 Min Read

– ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್
– ಐಟಿ-ಬಿಟಿ ಕಂಪನಿಗಳು ಓಪನ್
– ಮೇ 3ರ ತನಕ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಸಿಎಂ ಯಡಿಯೂರಪ್ಪ ಗುಡ್‍ನ್ಯೂಸ್ ನೀಡಿದ್ದು, ಏಪ್ರಿಲ್ 20ರ ನಂತರ ಯಾವುದೇ ಪಾಸ್ ಇಲ್ಲದೆ ಬೈಕ್‍ಗಳು ಓಡಾಡಬಹುದು ಎಂದು ಘೋಷಣೆ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಏಪ್ರಿಲ್ 20ರ ನಂತರ ದ್ವಿಚಕ್ರ ವಾಹಾನ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅದಕ್ಕೆ ಯಾವುದೇ ಪಾಸ್ ಅನುಮತಿ ಬೇಕಾಗಿಲ್ಲ. ಹೊರ ಜಿಲ್ಲೆಗಳಿಗೆ ಹೋಗುವಂತಿಲ್ಲ, ಅದೇ ಜಿಲ್ಲೆಯ ಒಳಗೆ ಓಡಾಡಬೇಕು. ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಇತರ ವಲಯಗಳಲ್ಲಿ ದ್ವಿಚಕ್ರ ವಾಹನಗಳು, ಇಲ್ಲಿಯವರೆಗೆ ಪಾಸ್ ಪಡೆದಿರುವ ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ಇಲ್ಲಿಯವರೆಗೆ ಪಾಸ್ ಕೊಟ್ಟಿರೋದು ಮೇ 3ರ ವರೆಗೆ ಅನುಮತಿ ಮುಂದೂಡಲಾಗಿದೆ. ಯಾವುದೇ ಕಾರಣಕ್ಕೂ ಹೊಸ ಪಾಸ ವಿತರಣೆ ಇಲ್ಲ. ಅಂತರ್ ಜಿಲ್ಲಾ ಓಡಾಟವಿಲ್ಲ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಏಪ್ರಿಲ್ 20ರಿಂದ ಐಟಿ-ಬಿಟಿ ಕಂಪನಿಗಳು ಓಪನ್ ಆಗುತ್ತದೆ. ಆದರೆ ಶೇ.33ರಷ್ಟು ಉದ್ಯೋಗಿಗಳು ಮಾತ್ರ ಇರುತ್ತಾರೆ.

ಪಬ್, ಬಾರ್, ಹೋಟೆಲ್, ಮಾಲ್ ಯಾವುದೂ ಇರಲ್ಲ. ವಾಣಿಜ್ಯ ಉದ್ದೇಶದ ಶಾಪ್ ಓಪನ್ ಇರಲ್ಲ. ಅಲ್ಲದೇ ಬಸ್‍ಗಳ ಸಂಚಾರ ಇರಲ್ಲ. ಆದರೆ ಕಂಪನಿಗಳ ಬಸ್‍ಗಳು ಓಡಾಟ ಮಾಡಬಹುದು. ಲಾಕ್‍ಡೌನ್ ಮುಗಿಯುವ ಮೇ 3ರ ತನಕ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೀಗಾಗಿ ಮೇ 3ರ ನಂತರ ಮದ್ಯ ಮಾರಾಟಕ್ಕೆ ತೀರ್ಮಾನ ಮಾಡುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.

ಕಂಟೈನ್ಮೆಂಟ್ ಝೋನ್ ಬಗ್ಗೆ ಚರ್ಚೆ ನಡೆಸಲಾಯಿತು. ಈ ಪ್ರದೇಶಗಳಲ್ಲಿ ಹೆಚ್ಚಿನ ಕಟ್ಟುನಿಟ್ಟು ಮಾಡಲಾಗುತ್ತೆ. ಈಗಾಗಲೇ ಎಂಟು ಜಿಲ್ಲೆಯಲ್ಲಿ ಮತ್ತು ಬೆಂಗಳೂರಿನಲ್ಲಿ 32 ಸ್ಥಳಗಳನ್ನ ಕಂಟೈನ್ಮೆಂಟ್ ಸ್ಥಳ ಎಂದು ಗುರುತಿಸಲಾಗಿದೆ. ಕಂಟೈನ್ಮೆಂಟ್ ಝೋನ್‍ಗಳಲ್ಲಿ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ಕೊಟ್ಟಿದ್ದೇವೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಿಗಿಭದ್ರತೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಗರ ಪ್ರದೇಶದಲ್ಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳುವ ವ್ಯವಸ್ಥೆ ಇರುವಲ್ಲಿ ನಿರ್ಮಾಣ ಚಟುವಟಿಕೆಗಳು ಪ್ರಾರಂಭಿಸಲು ಅನುಮತಿ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನಾ ವಲಯದ ಕೈಗಾರಿಕೆಗಳು, ಕೈಗಾರಿಕಾ ವಸಾಹತುಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು ಎಂದರು.

ಬೆಂಗಳೂರಲ್ಲಿ 32 ಕಂಟೈನ್ಮೆಂಟ್ ಝೋನ್ ಗುರುತು ಮಾಡಲಾಗಿದೆ. ಇಲ್ಲಿ ಯಾರೂ ಮನೆಯಿಂದ ಹೊರಬರುವಂತಿಲ್ಲ. ಮನೆಗೆ ನಾವು ಆಹಾರ ವ್ಯವಸ್ಥೆ ಮಾಡುತ್ತೇವೆ. ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ತೊಂದರೆ ಇಲ್ಲ ಎಂದರು. ಇದೇ ವೇಳೆ ಗೂಡ್ಸ್ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *