ಟಿಪ್ಪು ಜಯಂತಿ ಮಾಡಿದ್ರೆ ಸಿಎಂ ಅಧಿಕಾರ ಹೋಗುತ್ತೆ: ಶಾಸಕ ಯತ್ನಾಳ್ ಭವಿಷ್ಯ

Public TV
1 Min Read

ವಿಜಯಪುರ: ಟಿಪ್ಪು ಜಯಂತಿ ಪ್ರಾರಂಭಿಸಿದ ಮಾಜಿ ಸಿಎಂ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡಿದ್ದಾರೆ. ಈಗ ಸಿಎಂ ಕುಮಾರಸ್ವಾಮಿ ಅವರು ಟಿಪ್ಪು ಜಯಂತಿಯನ್ನು ಮುಂದುವರೆಸಿದಲ್ಲಿ ಅವರು ಸಹ ಒಂದು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.

ಮತಾಂಧ ಟಿಪ್ಪುವಿನ ಖಡ್ಗ ಲಕ್ಷಾಂತರ ಹಿಂದೂಗಳ ನರಮೇಧಕ್ಕೆ ಕಾರಣವಾಗಿತ್ತು. ಅದನ್ನು ಭಾರತಕ್ಕೆ ತಂದ ವಿಜಯ್ ಮಲ್ಯ ಸರ್ವನಾಶವಾಗಿ ಹೋದರು. ಟಿಪ್ಪು ಸುಲ್ತಾನ ಬಗ್ಗೆ ಧಾರಾವಾಹಿ ಮಾಡಲು ಹೋದ ಕುಟುಂಬ ಹಾಳಾಗಿ ಹೋಯಿತು. ಟಿಪ್ಪು ಒಬ್ಬ ಮತಾಂಧ, ಲಕ್ಷಾಂತರ ಹಿಂದುಗಳ ಕಗ್ಗೋಲೆ ಮಾಡಿದವ. ಹಿಂದುಸ್ಥಾನವನ್ನು ಇಸ್ಲಾಮೀಕರಣ ಮಾಡಲು ಹೊರಟವನ ವೈಭವೀಕರಣವನ್ನು ಈ ದೇಶ ಒಪ್ಪಿಲ್ಲ ಎಂದು ಟಿಪ್ಪು ಜಯಂತಿ ವಿರುದ್ಧ ಶಾಸಕರು ಕಿಡಿ ಕಾರಿದರು.

ಆ ಕಾರಣಕ್ಕೆ ನಗರದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಬೇಡಿ. ಯಾವುದೇ ಕಾರಣಕ್ಕೂ ಸರ್ಕಾರದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲ್ಲ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಇತ್ತ ಬೆಂಗಳೂರಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ಟಿಪ್ಪು ಜಯಂತಿ ವಿಚಾರವನ್ನ ವೋಟ್ ಬ್ಯಾಂಕ್ ಗಾಗಿ ಬಿಜೆಪಿಯವರು ವಿವಾದ ಮಾಡ್ತಿದ್ದಾರೆ. ಅವರಿಗೆ ಚುನಾವಣೆಗೆ ಯಾವುದೇ ವಿಚಾರ ಇಲ್ಲ. ಹಿಂದೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದರು. ಯಡಿಯೂರಪ್ಪ, ಆರ್ ಅಶೋಕ್, ಶೋಭಾ ಕರಂದ್ಲಾಜೆ ಜಯಂತಿ ಮಾಡಿಲ್ವಾ….? ಈಗ್ಯಾಕೆ ಇವರಿಗೆ ಟಿಪ್ಪು ಜಯಂತಿ ಬೇಡ. ಸಿದ್ದರಾಮಯ್ಯ ಸರ್ಕಾರ ಈ ಹಿಂದೆ ಮೂರು ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿಯೂ ಟಿಪ್ಪು ಜಯಂತಿ ಅಚರಣೆ ಮಾಡಲಾಗುತ್ತಿದೆ. ಎಲ್ಲ ತಾಲೂಕು ಮಟ್ಟದಲ್ಲಿಯೂ ಜಯಂತಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *