ಶಿರಾಡಿಘಾಟ್‌ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ

Public TV
1 Min Read

ಹಾಸನ: ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲು ಬಳಿ ಜೋರು ಮಳೆಯಿಂದಾಗಿ ಪದೇ ಪದೇ ಭೂಕುಸಿತ (Shiradi Ghat Landslide) ಸಂಭವಿಸುತ್ತಿರುವ ಶಿರಾಡಿಘಾಟ್‌ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ರಾಷ್ಟ್ರೀಯ ಹೆದ್ದಾರಿ (NHAI), ಚತುಷ್ಪಥ ರಸ್ತೆ ಮಾಡುತ್ತಿದ್ದಾರೆ. ಸುಮಾರು 38 ಕಿಮೀ ರಸ್ತೆ ಮಾಡುತ್ತಿದ್ದಾರೆ. ಮೇಲೆ ಸಡಿಲ ಮಣ್ಣು ಇದೆ. ಹೆಚ್ಚು ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು. 90 ಡಿಗ್ರಿ ಕಟಿಂಗ್ ಮಾಡಬಾರದು. 45 ಡಿಗ್ರಿ ಕಟ್ ಮಾಡಬೇಕು. ಆಗ ಭೂಕುಸಿತ ಆಗಲ್ಲ ಎಂದು ಹೇಳಿದರು.

ಈ ವರ್ಷ ಹಾಸನ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಶೇ.65ಕ್ಕೂ ಹೆಚ್ಚು ಮಳೆಯಾಗಿದೆ, ಸಕಲೇಶಪುರದಲ್ಲಿ ಶೇ.100ಕ್ಕೂ ಹೆಚ್ಚು ಮಳೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇನೆ. ಮುಖ್ಯ ಕಾರ್ಯದರ್ಶಿ ಸಹ ಅವರಿಗೆ ಪತ್ರ ಬರೆಯುತ್ತಾರೆ. ನಾನು ದೆಹಲಿಗೆ ಹೋದಾಗ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತ ಆಗುತ್ತಿದೆ. ಸ್ಥಳೀಯರ ಅಭಿಪ್ರಾಯವನ್ನು ಕೇಂದ್ರ ಸಚಿವರಿಗೆ ತಿಳಿಸುತ್ತೇನೆ. ಭೂ ಕುಸಿತ ಸಮಸ್ಯೆಯಿಂದ ವಾಹನ ಓಡಾಟಕ್ಕೆ ಸಮಸ್ಯೆ ಆಗಿದೆ. ಅದಕ್ಕಾಗಿಯೇ ಇಲ್ಲಿಗೆ ಎಸ್‌ಡಿಆರ್‌ಎಫ್ ಟೀಂ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸುತ್ತೇವೆ ಎಂದು ಅಭಯ ನೀಡಿದರು.

Share This Article