ನನ್ನನ್ನ ಮುಟ್ಟಿದರೆ ಹುಷಾರ್ – ಸದ್ದಿಲ್ಲದೇ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿಎಂ

Public TV
1 Min Read

ಬೆಂಗಳೂರು: ನನ್ನನ್ನ ಮುಟ್ಟಿದರೆ ಹುಷಾರ್ ಎಂದು ಬಹಿರಂಗ ಸವಾಲು ಎಸೆದ ಸಿಎಂ ಸಿದ್ದರಾಮಯ್ಯನವರು (CM Siddaramaiah) ಸದ್ದಿಲ್ಲದೇ ಈಗ ಶಕ್ತಿ ಪ್ರದರ್ಶನಕ್ಕೆ ಸಿದ್ದತೆ ನಡೆಸುತ್ತಿದ್ದಾರೆ.

ಹೌದು. ಡಿಸೆಂಬರ್ 5 ರಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ (HD Devegowda) ತವರು ಜಿಲ್ಲೆ ಹಾಸನದಲ್ಲೇ (Hassana) ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮಾವೇಶ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಐದು ಜಿಲ್ಲೆಯನ್ನೊಳಗೊಂಡಂತೆ ದೊಡ್ಡ ಮಟ್ಟದಲ್ಲಿ ಅಹಿಂದ ಸಮಾವೇಶ (Ahinda Samavesha) ನಡೆಸಲು ಸಿದ್ದರಾಮಯ್ಯ ತಂಡ ಮುಂದಾಗಿದೆ. ಆಪ್ತರ ಮುಂದೆ ಶಕ್ತಿ ಪ್ರದರ್ಶನ ಮಾಡಲೇಬೇಕು ಎಂದಿರುವ ಸಿದ್ದರಾಮಯ್ಯ ಸಚಿವರುಗಳಿಗೂ ಖುದ್ದಾಗಿ ಕರೆ ಮಾಡುತ್ತಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಜಮೀರ್ ಹೇಳಿದ್ದು ಸರಿಯಲ್ಲ: ಕುಮಾರಸ್ವಾಮಿ ‘ಕರಿಯ’ ಹೇಳಿಕೆಗೆ ಡಿಕೆಶಿ ವಿರೋಧ

ಏನೇ ಆಗಲಿ ಶಕ್ತಿ ತೋರಿಸಲೇಬೇಕು. ಡಿಸೆಂಬರ್ 5 ರಂದು ಸಮಾವೇಶ ನಡೆಸಲೇಬೇಕೆಂದು ಪಣ ತೊಟ್ಟಿರುವ ಸಿಎಂ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಸಚಿವ ಮಹಾದೇವಪ್ಪ ಅವರಿಗೆ ಸಮಾವೇಶದ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದಾರೆ.

ಶತಾಯಗತಾಯ ಸಮಾವೇಶ ಮಾಡಲೇಬೇಕು ಸಿದ್ದತೆ ಮಾಡಿಕೊಳ್ಳಿ. ಹೈಕಮಾಂಡ್ ಜೊತೆ ನಾನು ಮಾತನಾಡುತ್ತೇನೆ ಎಂದು ಆಪ್ತರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Share This Article