ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

By
2 Min Read

ಚಾಮರಾಜನಗರ: ವಿಧಾನಸಭಾ ಚುನಾವಣೆ ಸಮಯ ಸಮೀಪಿಸುತ್ತಿದ್ದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾದಂತೆ ಕಾಣುತ್ತಿದೆ. ಇದಕ್ಕೊಂದು ತಾಜ ಉದಾಹರಣೆಗೆ ಎಂಬಂತೆ ಗುರುವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ರು. ಈ ವೇಳೆ ಸಿಎಂ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಬೆಳ್ಳಿ ಉಡುಗೊರೆಗಳನ್ನು ದೇವರಿಗೆ ಅರ್ಪಿಸಲು ಮುಂದಾಗಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸರ್ಕಾರದ ಸಾಧನಾ ಸಮಾವೇಶವನ್ನು ನಡೆಸಿದ ನಂತರ ಸಿಎಂ ಸಿದ್ದರಾಮಯ್ಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ತಮ್ಮ ಆಪ್ತರೊಂದಿಗೆ ವಾಸ್ತವ್ಯ ಹೂಡಿದರು. ನಂತರ ಬೆಳಗ್ಗೆ 8 ಗಂಟೆಗೆ ಮಾದಪ್ಪನ ಸನ್ನಿಧಿಗೆ ಹೋಗಿ ಸುಮಾರು 20 ನಿಮಿಷಗಳ ಕಾಲ ಮಾದಪ್ಪನ ಮುಂದೆ ನಿಂತು ಧ್ಯಾನ ಮಾಡಿದರು. ಇದಾದ ಬಳಿಕ ಸಿಎಂ ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಿಎಂ ಸಭೆ ವೇಳೆ ಅಧಿಕಾರಿಯೊಬ್ಬರು ಮಾದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ರು. ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹಣವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ರು. ಈ ವೇಳೆ ಸಿಎಂ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಇದಲ್ಲದೇ ಸಚಿವೆ ಗೀತಾ ಮಹದೇವಪ್ರಸಾದ್ ಅವರನ್ನು ಕರೆದು, ಮಲೆಮಹದೇಶ್ವರ ಬೆಟ್ಟದಲ್ಲಿ ಒಂದು ಪ್ಯೂರ್ ಚಿನ್ನದ ರಥ ಮಾಡಿಸಬೇಕು. ತಿರುಪತಿ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ಇರುವ ಚಿನ್ನದ ರಥಕ್ಕಿಂತ ಉತ್ತಮ ಚಿನ್ನದ ರಥ ನಿರ್ಮಾಣ ಮಾಡಬೇಕು. ಈ ಕೆಲಸವನ್ನು ಆದಷ್ಟು ಬೇಗ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಮೊದಲು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ನಾಸ್ತಿಕಪಟ್ಟ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ ಅವರು ಅಧಿಕಾರ ಮುಗಿಯುತ್ತಿದ್ದಂತೆ ಆಸ್ತಿಕರಾಗುತ್ತಾ ಸಾಗುತ್ತಿರುವಂತೆ ಕಾಣುತ್ತಿದೆ. ಸಿಎಂ ದಸರೆಯಲ್ಲಿ ಶೂ ಹಾಕಿಕೊಂಡು ಪುಷ್ಪರ್ಚನೆ ಮಾಡಿದ್ದರು. ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆಯೂ ಇದೇ ರೀತಿ ನಡೆದಿತ್ತು. ಇತ್ತೀಚೆಗೆ ಧರ್ಮಸ್ಥಳದಲ್ಲಿ ಮೀನು ತಿಂದು ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಮಲೈಮಹದೇಶ್ವರ ಬೆಟ್ಟಕ್ಕೆ ಮಾತ್ರ ಪರಮಭಕ್ತರಾಗಿರುವ ಸಿದ್ದರಾಮಯ್ಯ ಅವರು, 2016ರ ಸಂದರ್ಭದಲ್ಲಿ ಕಾವೇರಿ ಸಮಸ್ಯೆ ವೇಳೆ ಬೆಟ್ಟಕ್ಕೆ ಬಂದು ಮಾದಪ್ಪನಲ್ಲಿ ಹಾಡು ಹೇಳಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಮತ್ತೆ ಬೆಳ್ಳಿ ಉಡುಗೊರೆಗಳನ್ನ ಕಾಣಿಕೆಯಾಗಿ ನೀಡುತ್ತಿರೋದು ಸಿಎಂ ದೈವ ಭಕ್ತಿಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

 

 

Share This Article
Leave a Comment

Leave a Reply

Your email address will not be published. Required fields are marked *