‌ರಾಜ್ಯದಲ್ಲಿ ಇನ್ನೂ 184 ಇಂದಿಯಾ ಕ್ಯಾಂಟೀನ್‌ ಆರಂಭಿಸುತ್ತಿದ್ದೇವೆ – ಸಿಎಂ ಸಿದ್ದರಾಮಯ್ಯ

Public TV
2 Min Read

– ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ – ಜಿಟಿಡಿ
– ಭಾಷಣದುದ್ದಕ್ಕೂ ಸಿದ್ದರಾಮಯ್ಯರ ಆಡಳಿತವನ್ನ ಹಾಡಿ ಹೊಗಳಿದ ಶಾಸಕ

ಮೈಸೂರು: ನಗರದ ಹಿನಕಲ್‌ನಲ್ಲಿಂದು (Hinkal) ಜಿಲ್ಲೆಯ ಒಟ್ಟು 9 ಇಂದಿರಾ ಕ್ಯಾಂಟೀನ್‌ಗಳನ್ನು ಮುಖ್ಯಮಂತ್ರಿ ಸಿದ್ದರಾಮ್ಯಯ ಲೋಕಾರ್ಪಣೆಗೊಳಿಸಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‌ನಲ್ಲಿ ಸಿದ್ದರಾಮಯ್ಯ (Siddaramaiah) ಹಾಗೂ ಶಾಸಕ ಜಿ.ಟಿ ದೇವೇಗೌಡ ಸೇರಿ ಇಂದಿರಾ ಕ್ಯಾಂಟೀನ್‌ ಲೋಕಾರ್ಪಣೆಗೊಳಿಸಿದರು.

ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ ದೇವೇಗೌಡ ಅವರು, ಮತ್ತೆ ಸಿದ್ದರಾಮಯ್ಯ ಅವರೊಂದಿಗೆ ಕಾಣಿಸಿಕೊಂಡದ್ದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ – ಡಿಕೆಶಿ

ಇನ್ನೂ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಅವರು, ಭಾಷಣದ ಉದ್ದಕ್ಕೂ ಸಿದ್ದರಾಮಯ್ಯರ ಆಡಳಿತವನ್ನು ಹಾಡಿ ಹೊಗಳಿದರು. ಬಡ ಜನರಿಗೆ ಐದು ಕೆಜಿ ಅಕ್ಕಿ ಕೊಟ್ಟ ಕೀರ್ತಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಬಡವರ ಹಸಿವು ನೀಗಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ. ಶಾಸಕ, ಮಂತ್ರಿ, ಡಿಸಿಎಂ, ಸಿಎಂ ಹೀಗೆ 47 ವರ್ಷಗಳ ಆಡಳಿತ ಮಾಡಿರುವ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿ ದಾಖಲೆ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ಸಿದ್ದರಾಮಯ್ಯ ಮಾತು ಕೇಳುತ್ತಾರೆ. ಗ್ರೇಟರ್ ಮೈಸೂರು ಮಾಡಿ ನಿಮ್ಮ ಕೀರ್ತಿ ಹೆಚ್ಚಿಸಿಕೊಳ್ಳಿ. ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಾಡಿರೋದು ಒಳ್ಳೆಯ ಬೆಳವಣಿಗೆ. ಯುಜಿಡಿ ಸಮಸ್ಯೆ ನೀವೆ ಬಗೆಹರಿಸಬೇಕು. ನೀವು ಅಲ್ಲದಿದ್ದರೆ ಇನ್ನೂ ಯಾರು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದರು.

ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಬಡವರು, ಕೂಲಿ ಕಾರ್ಮಿಕರು, ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳ ಹಸಿವು ನೀಗಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದೆ. 2017 ರಲ್ಲಿ ರಾಹುಲ್ ಗಾಂಧಿಯವರನ್ನು ಕರೆಸಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ಆದರೆ ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಕ್ಯಾಂಟೀನ್ ಗಳು ಸೊರಗಿದವು. ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದು ಹಿನಕಲ್ ನಲ್ಲೇ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಿರುವುದು ಮಾತ್ರವಲ್ಲದೆ, ರಾಜ್ಯಾದ್ಯಂತ ಹೊಸದಾಗಿ ಇನ್ನೂ 184 ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ. ಹಿನಕಲ್ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗ್ರಾಮ. ಈ ಗ್ರಾಮದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು. ಎಂಜಿನಿಯರ್ ಗಳ ನೇಮಕಾತಿ, ಪಿಯುಸಿ ಕಾಲೇಜು ಸೇರಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಜಿ.ಟಿ ದೇವೇಗೌಡ ಅವರು ಕೋವಿಡ್‌ ಜಾಗೃತಿ ಮೂಡಿಸಿದರು.  ಇದನ್ನೂ ಓದಿ: ಕೇರಳ | ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ಕಂಟೇನರ್‌ಗಳು ಸಮುದ್ರಪಾಲು – ಹೆಚ್ಚಿದ ಆತಂಕ

Share This Article