ಪ್ರಜಾಪ್ರಭುತ್ವ, ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ನೆಹರೂ – ಸಿದ್ದರಾಮಯ್ಯ

Public TV
3 Min Read

– ಮೋದಿ ದೇಶದಲ್ಲಿ ಒಂದೇ ಒಂದು ಸಾರ್ವಜನಿಕ ಉದ್ದಿಮೆ ಸ್ಥಾಪಿಸಲಿಲ್ಲ ಎಂದ ಸಿಎಂ

ಬೆಂಗಳೂರು: ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶದ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದು ಜವಾಹರಲಾಲ್ ನೆಹರೂ (Jawaharlal Nehru) ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಬಣ್ಣಿಸಿದರು.

ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ (KPCC Office) ನಡೆದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಹಿಂದೂ ರಾಷ್ಟ್ರ ಕನಸು, ಮೋದಿ ಏನು ದೇವರ ಅವತಾರನಾ?: ಸಿದ್ದರಾಮಯ್ಯ ವ್ಯಂಗ್ಯ

ನೆಹರೂ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ತತ್ವದಲ್ಲಿ ದೇಶವನ್ನ ಅಭಿವೃದ್ಧಿ ಮಾಡಲು ಮುಂದಾದರು. 17 ವರ್ಷಗಳ ದೀರ್ಘ ಕಾಲ ದೇಶದ ಪ್ರಧಾನ ಮಂತ್ರಿಯಾಗಿ ಭವಿಷ್ಯದ ಭಾರತವನ್ನು ಕಟ್ಟುವ ಕೆಲಸ ಮಾಡಿದರು. ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಬದ್ಧತೆ ಉಳ್ಳವರಾಗಿದ್ದರು. ಆಗ ಮಾತ್ರ ವಿಶ್ವದ ಅಭಿವೃದ್ಧಿ ಸಾಧ್ಯ ಎನ್ನುವ ನಂಬಿಕೆ ಹೊಂದಿದ್ದರು ಎಂದು ವಿವರಿಸಿದರು.

ನೆಹರೂ ಇತಿಹಾಸಕಾರರೂ ಆಗಿದ್ದರು. ದೇಶದ ಇತಿಹಾಸ ಗೊತ್ತಿದ್ದರಿಂದಲೇ ಅವರು ದೇಶದ ಭವಿಷ್ಯ ರೂಪಿಸಿದರು. ಅಂಬೇಡ್ಕರ್ ಅವರ ಮಾತಿನಂತೆ, ಇತಿಹಾಸ ಗೊತ್ತಿದ್ದವರು ಮಾತ್ರ ದೇಶದ ಭವಿಷ್ಯ ರೂಪಿಸಬಲ್ಲರು. ನೆಹರೂ ಈ ಕೆಲಸ ಮಾಡಿ ದೇಶವನ್ನು ಕಟ್ಟಿ ಬೆಳೆಸಿದರು ಎಂದು ಉದಾಹರಣೆಗಳ ಸಮೇತ ವಿವರಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಅಪಘಾತಕ್ಕೆ ಒಂದೇ ದಿನ 51 ಬಲಿ- ಸಂಚಾರಿ ನಿಯಮ ಪಾಲನೆಗೆ ಅಲೋಕ್ ಕುಮಾರ್ ಮನವಿ

ಸ್ವಾತಂತ್ರ್ಯ ಬಂದಾಗ ನಿರುದ್ಯೋಗ ವ್ಯಾಪಕವಾಗಿತ್ತು:
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅನಕ್ಷರತೆ, ಬಡತನ, ನಿರುದ್ಯೋಗ ವ್ಯಾಪಕವಾಗಿತ್ತು. ಆರ್ಥಿಕ ಚೈತನ್ಯ ಇರಲಿಲ್ಲ. ಹಳ್ಳಿಗಳು ಸಂಕಷ್ಟದಲ್ಲಿದ್ದವು. ಈ ಎಲ್ಲಕ್ಕೂ ಪರಿಹಾರವಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಜೀವನದುದ್ದಕ್ಕೂ ಶ್ರಮಿಸಿದರು. ದೇಶವನ್ನು ವೈಜ್ಞಾನಿಕ, ಆಧುನಿಕತೆ ಆಧಾರದಲ್ಲಿ ನಿರ್ಮಿಸುತ್ತಾ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನಿರಂತರ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದರು ಎಂದು ವಿವರಿಸಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಲು ಹಿಂದಿನ ಬಿಜೆಪಿ ಆಡಳಿತವೆ ಕಾರಣ: ರಾಮಲಿಂಗಾರೆಡ್ಡಿ

ನೆಹರೂ ಬಗ್ಗೆ ಮಾತನಾಡುವ ಯೋಗ್ಯತೆ ಮೋದಿಗೆಲ್ಲಿದೆ?
ಭಾರತವನ್ನು ಇಡೀ ವಿಶ್ವದಲ್ಲಿ ಅತಿದೊಡ್ಡ ಮತ್ತು ಸದೃಢ ಪ್ರಜಾಪ್ರಭುತ್ವ ದೇಶವನ್ನಾಗಿ ರೂಪಿಸಿದ್ದು ನೆಹರೂ. ದೇಶದಲ್ಲಿರುವ ಬಹುತೇಕ ಅಣೆಕಟ್ಟುಗಳು ಆಗಿದ್ದು ನೆಹರೂ ಅವರ ಅವಧಿಯಲ್ಲಿ. ಕಾಂಗ್ರೆಸ್ ಏನೂ ಮಾಡಿಲ್ಲ ಎನ್ನುವ ನರೇಂದ್ರ ಮೋದಿ (PM Modi), ಇವತ್ತಿನವರೆಗೆ ಒಂದೇ ಒಂದು ಅಣೆಕಟ್ಟೆಯನ್ನಾಗಲಿ, ಸಾರ್ವಜನಿಕ ಉದ್ದಿಮೆಯನ್ನಾಗಲಿ ಸ್ಥಾಪಿಸಲಿಲ್ಲ. ಇವರಿಗೆ ನೆಹರೂ ಬಗ್ಗೆ ಮಾತನಾಡುವ ಯೋಗ್ಯತೆ ಏನಿದೆ ಎಂದು ಪ್ರಶ್ನಿಸಿದರು.

ನೆಹರೂ ಮತ್ತು ಇಡೀ ಭಾರತೀಯರು, ಬ್ರಿಟಿಷರ ವಿರುದ್ಧ ಹೋರಾಡುತ್ತಾ ಜೈಲು ವಾಸ ಅನುಭವಿಸುತ್ತಿದ್ದಾಗ ಆರ್‌ಎಸ್‌ಎಸ್‌ ಬ್ರಿಟೀಷರ ವಿರುದ್ಧ ನೆಪಕ್ಕೂ ಸೊಲ್ಲೆತ್ತಲಿಲ್ಲ. ಇವರು ಈಗ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇರುವ ನಮಗೆ ದೇಶಭಕ್ತಿಯ ಪಾಠ ಮಾಡುತ್ತಾ ನಗೆಪಾಟಲಿಗೀಡಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Share This Article