ಕಲಬುರಗಿ: ಬಿಪಿಎಲ್ ಕಾರ್ಡ್ನಲ್ಲಿ ಅರ್ಹರ ಹೆಸರು ಬಿಟ್ಟು ಹೋಗಿದ್ರೆ ಅಂತಹವರನ್ನು ಹೊಸದಾಗಿ ಸೇರ್ಪಡೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ.
ಕಲಬುರಗಿಯಲ್ಲಿ (Kalaburagi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ನ ಅರ್ಹರನ್ನು ತೆಗೆಯುವುದಿಲ್ಲ. ಅನರ್ಹ ಯಾರೆಲ್ಲ ಇದ್ದಾರೆ ಅವರನ್ನು ಬಿಪಿಎಲ್ ಕಾರ್ಡ್ನಿಂದ ತೆಗೆದು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವ್ದೇ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡಲ್ಲ – ಕೆ.ಹೆಚ್ ಮುನಿಯಪ್ಪ
ಕ್ರಿಶ್ಚಿಯನ್ ಧರ್ಮದ ಹಿಂದೆ ಹಿಂದೂ ಜಾತಿಗಳ ಉಲ್ಲೇಖ ವಿಚಾರವಾಗಿ ಮಾತನಾಡಿದ ಅವರು ಯಾರು ಏನು ಹೇಳ್ತಾರೋ ಅದನ್ನ ಬರೆದುಕೊಳ್ತಾರೆ. ಕ್ರಿಶ್ಚಿಯನ್ನರು, ಮುಸ್ಲಿಮರು ಈ ದೇಶದ ನಾಗರಿಕರಲ್ವ? ಈ ವಿಚಾರ ಬಿಜೆಪಿಯವರು ರಾಜ್ಯಪಾಲರಿಗೆ ದೂರು ಕೊಡಲಿ ಎಂದು ಕಿಡಿಕಾರಿದ್ದಾರೆ.
ಜಾತಿ ಸಮೀಕ್ಷೆಯಲ್ಲಿ ನಾಸ್ತಿಕ ಕಾಲಂ ಬಗ್ಗೆ ಬಿಜೆಪಿ ಅಪಸ್ವರದ ಬಗ್ಗೆ ಮಾತನಾಡಿದ ಅವರು ಆರ್.ಅಶೋಕ್ ಹೇಳಿದ ಹಾಗೆ ಕೇಳೋಕೆ ಆಗೋದಿಲ್ಲ. ಬಿಜೆಪಿಯವರು ಏನು ಮಾಡಿದ್ರೂ ಮಾತಾಡ್ತಾರೆ. ನಾವು ಸೋಶಿಯೋ ಎಜುಕೇಷನ್ ಸರ್ವೇ ಮಾಡ್ತಿದ್ದೇವೆ. ಸ್ವಾತಂತ್ರ‍್ಯ ಬಂದು 78 ವರ್ಷ ಆಯ್ತು ಜನರ ಆರ್ಥಿಕ ಶೈಕ್ಷಣಿಕ ಪರಿಸ್ಥಿತಿ ಏನಿದೆ ಅಂತಾ ತಿಳಿದುಕೊಳ್ಳಲು ಅನುಕೂಲ ಆಗುತ್ತದೆ ಎಂದಿದ್ದಾರೆ.
ಕುರುಬ ಸಮೂದಾಯ ಎಸ್ಟಿ ಸೇರ್ಪಡೆ ಪ್ರತಿಕ್ರಿಯೆ ನೀಡಿದ ಅವರು ಇದನ್ನ ಕಳೆದ ಸರ್ಕಾರದಲ್ಲೇ ಶಿಫಾರಸು ಮಾಡಲಾಗಿತ್ತು. ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಅದನ್ನು ಒಪ್ಪುವುದು, ಬಿಡುವುದು ಕೇಂದ್ರ ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ.