ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!

Public TV
2 Min Read

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರಂಭಗೊಂಡಿರುವ ಲಾರಿ ಮುಷ್ಕರ (Lorry Strike) 2ನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಜೊತೆ ಲಾರಿ ಮಾಲೀಕರ ಮಾತುಕತೆ ವಿಫಲವಾದ ಹಿನ್ನೆಲೆ ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಲಾರಿ ಅಸೋಸಿಯೇಷನ್ (Lorry Assosiation) ಸಜ್ಜಾಗಿದೆ.

ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮಾಲೀಕರ ಸಂಘ ಸರ್ಕಾರದ ವಿರುದ್ಧ ಸಮರಸಾರುತ್ತಿದೆ. ಇಂದೂ ಕೂಡ ಮುಂದುವರಿಯಲಿರುವ ಲಾರಿ ಮುಷ್ಕರ ಅನಿರ್ದಿಷ್ಟಾವಧಿ ಲಾರಿ ಪ್ರತಿಭಟನೆಗೆ ಸಂಘಟಕರಿಗೆ ಕರೆ ನೀಡಿದೆ.ಇದನ್ನೂ ಓದಿ: ಹತ್ತೂರಿನ ಒಡೆಯ ಪುತ್ತೂರು ಮಹಾಲಿಂಗೇಶ್ವರ – ಇಲ್ಲಿ ಆನೆಗಳಿಗೆ ಪ್ರವೇಶವಿಲ್ಲ

ಮಂಗಳವಾರ ಲಾರಿ ಮಾಲೀಕರ ಫೆಡರೇಷನ್ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಕರೆ ಕೊಟ್ಟಿದ್ದ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಂಗಳೂರು ನಗರದಲ್ಲಿ ಖಾಸಗಿ ಲಾರಿ, ಗೂಡ್ಸ್ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು. ಜಲ್ಲಿ, ಮರಳು ವಾಹನಗಳ ಸಂಚಾರ ಇಳಿಮುಖವಾಗಿತ್ತು. ಈ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಸೇರಿ ಹಲವರನ್ನು ಕರೆದು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಸಾರಿಗೆ ಸಚಿವರ ಸಂಧಾನ ವಿಫಲಗೊಂಡಿತ್ತು.

ಬಳಿಕ ಸಿಎಂ ಸಿದ್ದರಾಮಯ್ಯ ಜೊತೆ ಮಂಗಳವಾರ ಸಂಜೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎರಡೂ ಬೇಡಿಕೆಗಳು ಆರ್‌ಟಿಓಗೆ ಸಂಬಂಧಪಟ್ಟಿವೆ. ಫಿಟ್ನೆಸ್ ಸರ್ಟಿಫಿಕೇಟ್ ವಿಚಾರ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ. ಟೋಲ್ ದರ, ಡಿಸೇಲ್ ವಿಚಾರ ಸಿಎಂಗೆ ಸಂಬಂಧಪಟ್ಟಿದೆ. ಇದೇ ವೇಳೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಮಾಡಬೇಡಿ ಎಂದು ಸಿಎಂ ಒತ್ತಾಯ ಪೂರ್ವಕವಾಗಿ ಹೇಳಿದರು.

ಇನ್ನೂ ಸಿಎಂ ಮಾತಿಗೂ ಮಣೆ ಹಾಕದ ಲಾರಿ ಅಸೋಸಿಯೇಷನ್, ಮುಷ್ಕರ ಮುಂದುವರೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಸಿಎಂ ಸಿದ್ದರಾಮಯ್ಯ ಡಿಸೇಲ್ ದರ ಏರಿಕೆ ಕಡಿಮೆ ಮಾಡುವ ಬಗ್ಗೆ ಹಾಗೂ ಟೋಲ್ ಬಗ್ಗೆ ಮಾತನಾಡತ್ತಿಲ್ಲ. ಆಟೋ, ರಿಕ್ಷಾದಂತೆ ಲಾರಿಗಳಿಗೂ ಫಿಕ್ಸ್ ಬಾಡಿಗೆ ದರ ಮಾಡಿ, ಸಿಎಂ ಮಾತುಕತೆಗೆ ಸಮ್ಮತವಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರೆಯಲಿದೆ ಎಂದರು.

ಒಟ್ಟಿನಲ್ಲಿ ಸರ್ಕಾರ ಹಾಗೂ ಲಾರಿ ಮಾಲೀಕರ ನಡುವಿನ ಮಾತುಕತೆ ವಿಫಲವಾಗಿದ್ದು, ಇಂದಿನಿಂದ ಮುಷ್ಕರ ತೀವ್ರಗೊಳ್ಳುವ ಸಾಧ್ಯತೆಯಿದೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

Share This Article