ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳು ಎಲ್ಲ ಕೋನಗಳಿಂದಲು ಲೆಕ್ಕ ಹಾಕಿ, ವಿಮರ್ಶಿಸಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡ್ತಿವೆ. ಈ ನಡುವೆ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಹಜವಾಗಿ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಕ್ರೆಡಿಟ್ ಪಡೆಯಲು ಮುಂದಾದ ಸಿಎಂ ಸಿದ್ದರಾಮಯ್ಯಗೆ ಬ್ರಾಹ್ಮಣರು ಸವಾಲು ಹಾಕ್ತಾರಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಲಿಂಗಾಯತರಿಗೆ ಹಾಗೂ ಬಸವನಗುಡಿಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಸಮುದಾಯ ಮುಖಂಡರಿಂದ ಸಿಎಂ ಹಾಗೂ ಪರಮೇಶ್ವರ್ ಮೇಲೆ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ಈ ಬೇಡಿಕೆಗೆ ಸಿಎಂ ಹಾಗೂ ಪರಮೇಶ್ವರ್ ರಿಂದ ಸಮರ್ಪಕ ಪ್ರತಿಕ್ರಿಯೆ ಇದೂವರೆಗೆ ಸಿಕ್ಕಿಲ್ಲವಂತೆ.
ಈ ಬಾರಿ ಕಾಂಗ್ರೆಸ್‍ಗೆ ಗೆಲವು ಮುಖ್ಯವಾಗಿದ್ದರಿಂದ ಬೆಂಗಳೂರಿನಂತಹ ನಗರದ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಸಾಧ್ಯವಿಲ್ಲ. ರಾಜಾಜಿನಗರದ ಬದಲು ಮಲ್ಲೇಶ್ವರಂ ಅಥವಾ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಲಿಂಗಾಯತ ಅಭ್ಯರ್ಥಿಗೆ ಅವಕಾಶ ನೀಡುವ ಕುರಿತು ಪರಿಶೀಲಿಸುವುದಾಗಿ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಆದರೆ ಮಹಾಲಕ್ಷ್ಮಿ ಲೇಔಟ್ ಹಾಗೂ ಮಲ್ಲೇಶ್ವರಂನಲ್ಲಿ ಸಮುದಾಯದ ಮತ ಇಲ್ಲದ ಕಾರಣ ಗೆಲುವು ಕಷ್ಟ ಎಂದು ಲಿಂಗಾಯತ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವನಗುಡಿಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತ ಪ್ರೊ.ಬಿ.ಕೆ.ಚಂದ್ರಶೇಖರ್ ಬ್ರಾಹ್ಮಣರ ಕೋಟಾದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸಿದ್ದಾರೆ. ಆದ್ರೆ ಚಂದ್ರಶೇಖರ್ ಅವರಿರೆ ಸಿಎಂ ಮತ್ತು ಪರಮೇಶ್ವರ್ ಟಿಕೆಟ್ ನೀಡಲು ಆಸಕ್ತಿ ತೋರಿಸ್ತಿಲ್ಲ ಅಂತಾ ಹೇಳಲಾಗ್ತಿದೆ. ಹೀಗಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಚಂದ್ರಶೇಖರ್ ಹಾಗೂ ಬೋರೇಗೌಡರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.
ಇತ್ತ ರಾಜಾಜಿನಗರದಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಜಿಲ್ಲಾ ಘಟಕ ಸಿಎಂ ಹಾಗೂ ಪರಮೇಶ್ವರ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.