ನವದೆಹಲಿ: ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಯ ಮಾಹಿತಿ ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಪ್ರಜೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯ. ನಮ್ಮ ಸಂವಿಧಾನ ಸಾಮಾಜಿಕ ನ್ಯಾಯವನ್ನು ಬೆಂಬಲಿಸುತ್ತದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ಸಮಾನತೆಯೆಂಬುದು ದೇಶದಲ್ಲಿ ಸ್ಥಾಪಿತವಾಗಿದೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ಇಂತಹ ಸಮೀಕ್ಷೆ ನಡೆಸಲೇಬೇಕಾಗುತ್ತದೆ. ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಬೇಕೆಂಬುದು ರಾಹುಲ್ ಗಾಂಧಿಯವರು ಬದ್ಧರಾಗಿದ್ದಾರೆ. ಕೇವಲ ಜಾತಿಗಣತಿ ಮಾಡುವ ಜೊತೆಗೆ ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಿದಾಗ ಮಾತ್ರ, ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ. ಇದು ಭಾಗೀಧಾರಿ ನ್ಯಾಯ ಸಮ್ಮೇಳನದ ಮೂಲ ಉದ್ದೇಶ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಸಮೀಕ್ಷೆ ಕೇವಲ ಓಬಿಸಿ ವರ್ಗಕ್ಕೆ ಸಂಬಂಧಿಸಿದ್ದಲ್ಲ:
ಎಐಸಿಸಿಯ ಓಬಿಸಿ ಸಲಹಾ ಮಂಡಳಿಯಲ್ಲಿ ನಾನು ಓರ್ವ ಸದಸ್ಯನಾಗಿದ್ದು, ಜು.15 ಹಾಗೂ 16ರಂದು ಬೆಂಗಳೂರಿನಲ್ಲಿ ಮಂಡಳಿಯ ಪ್ರಥಮ ಸಭೆ ನಡೆದಿತ್ತು. ಎಐಸಿಸಿಯ ಹಿಂದುಳಿದ ವರ್ಗಗಳ ವಿಭಾಗಕ್ಕೆ ಡಾ.ಅನಿಲ್ ಜೈಹಿಂದ್ ಅವರು ಮುಖ್ಯಸ್ಥರಾಗಿದ್ದಾರೆ. ಆ ಸಭೆಯಲ್ಲಿ ಬೆಂಗಳೂರು ಘೋಷಣೆ ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. 2015ರಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಪ್ರಾರಂಭಿಸಿದ ರಾಜ್ಯ ಕರ್ನಾಟಕ. 2018ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಜಾತಿಗಣತಿ ವರದಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಹತ್ತು ವರ್ಷಗಳ ಹಳೆಯ ಅಂಕಿ ಅಂಶಗಳಾದ್ದರಿಂದ ಕಾನೂನಿನನ್ವಯ ಮರುಗಣತಿ ಮಾಡುವ ಅಗತ್ಯವಿರುವುದರಿಂದ, ಸರ್ಕಾರ ಕರ್ನಾಟಕದಲ್ಲಿ ಮರುಗಣತಿ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಎಲ್ಲ ರಾಜ್ಯಗಳಲ್ಲಿಯೂ ತೆಲಂಗಾಣ ಮಾದರಿಯಲ್ಲಿ ಜಾತಿಗಣತಿಯನ್ನು ಮಾಡಬೇಕೆಂದು ನಿರ್ಣಯಿಸಲಾಯಿತು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ಹಿಂದುಳಿದ ವರ್ಗದ ಏಳಿಗೆಯ ವಿಷಯವನ್ನು ಮುಂಚೂಣಿಗೆ ತಂದ ನಂತರವಷ್ಟೇ, ಕೇಂದ್ರ ಸರ್ಕಾರ ಜಾತಿಗಣತಿಯನ್ನು ತಾನು ಮಾಡುವುದಾಗಿ ಹೇಳಿದೆ. 1931ನೇ ಇಸವಿಯ ನಂತರ ದೇಶದಲ್ಲಿ ಜಾತಿಗಣತಿ ನಡೆದಿಲ್ಲ. ಈ ಸಮೀಕ್ಷೆ ಕೇವಲ ಓಬಿಸಿ ವರ್ಗಕ್ಕೆ ಸಂಬಂಧಿಸಿದ್ದಲ್ಲ. ಕರ್ನಾಟಕದ ಎಲ್ಲ ಏಳು ಕೋಟಿ ಜನರ ಸಮೀಕ್ಷೆ ನಡೆಯುತ್ತದೆ ಎಂದರು.
ಕರ್ನಾಟಕದಲ್ಲಿ ಮತಗಳವು ಆಗಿದೆ ಎಂಬ ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿತ್ತು ಮತ್ತು ಚುನಾವಣಾ ಕ್ಷೇತ್ರಕ್ಕೆ ಸಂಬಂಧಪಡದ ಹೊಸ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಈ ರೀತಿ ಇಡೀ ದೇಶದಲ್ಲಿ ನಡೆದಿರುವ ಸಾಧ್ಯತೆಯಿದೆ. ಆದ್ದರಿಂದ ರಾಹುಲ್ ಗಾಂಧಿಯವರು ಈ ಗಂಭೀರ ವಿಚಾರವನ್ನು ಸದನದ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಎಲ್ಲ ಕ್ಷೇತ್ರದಲ್ಲಿ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುಂದಿದ್ದರೂ, ಮಹದೇವಪುರ ಕ್ಷೇತ್ರದಿಂದಾಗಿ ಕಾಂಗ್ರೆಸ್ ಸೋಲುವಂತಾಯಿತು. ಈ ರೀತಿ ಆಗಿರುವುದನ್ನು ಪ್ರಶ್ನಿಸಿದ ರಾಹುಲ್ ಗಾಂಧಿಯವರು, ಈ ಬಗ್ಗೆ ಸಾಕ್ಷ್ಯಾಧಾರಗಳು ಇವೆ ಎಂದು ತಿಳಿಸಿರುವುದಾಗಿ ಹೇಳಿದರು.
ಕರ್ನಾಟಕದ ಆಯ್ದ ಕ್ಷೇತ್ರಗಳಲ್ಲಿ ನಡೆದಿರಬಹುದು:
ಮತಗಳವು ಆಗಿದ್ದರೆ ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಆದರೆ ಕಾಂಗ್ರೆಸ್‌ನವರು ಚುನಾವಣಾ ಆಯೋಗಕ್ಕೆ ದೂರು ನೀಡಿಲ್ಲ ಎಂದು ಚುನಾವಣಾ ಆಯೋಗ ಹೇಳಿರುವ ಬಗ್ಗೆ ಉತ್ತರಿಸಿ, ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥವಾಗುವುದರೊಳಗೆ ಸರ್ಕಾರದ ಅವಧಿಯೇ ಮುಗಿದಿರುತ್ತದೆ. ಹಲವು ಪ್ರಕರಣಗಳಲ್ಲಿ ಮತಪಟ್ಟಿ ವಿಚಾರದಲ್ಲಿ ಚುನಾವಣಾ ಆಯೋಗ ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಆಯ್ದ ಮತಕ್ಷೇತ್ರಗಳಲ್ಲಿ ಮಾತ್ರ ಮತಗಳವು ಆಗಿದೆ ಎಂದರು. ಬಿಹಾರದ ರೀತಿಯಲ್ಲಿ ದೇಶದ ಉಳಿದೆಡೆಗಳಲ್ಲೂ ಮತಪಟ್ಟಿ ಪರಿಷ್ಕರಣೆ ಮಾಡುವುದಾಗಿ ಚುನಾವಣಾ ಆಯೋಗ ತಿಳಿಸಿರುವ ಬಗ್ಗೆ ಉತ್ತರಿಸಿ, ಚುನಾವಣೆಯ ದಿನ ಬೇರೆಯೇ ಮತದಾರರ ಪಟ್ಟಿ ಬರುವಂತೆ ಮಾಡುತ್ತಾರೆ ಎಂದರು.
ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ:
ಕಾಂಗ್ರೆಸ್‌ನ ರಣದೀಪ್ ಸುರ್ಜೇವಾಲಾ ಅವರು ರಾಜ್ಯದ ಸಚಿವರು, ಶಾಸಕರೊಂದಿಗೆ ಸಭೆ ನಡೆಸಿದಂತೆ, ಉತ್ತರ ಭಾರತದ ಹಿರಿಯ ಅಧಿಕಾರಿಗಳೊಂದಿಗೂ ಸಭೆ ನಡೆಸಿದ್ದಾರೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದರು.
ಮಹದಾಯಿ ಯೋಜನೆ-ಗೋವಾ ಸಿಎಂ ನಡೆ ಸರಿಯಿಲ್ಲ:
ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ಮಹದಾಯಿ ವಿಚಾರ ನ್ಯಾಯಮಂಡಳಿಯಲ್ಲಿ ಈಗಾಗಲೇ ಇತ್ಯರ್ಥವಾಗಿದ್ದರೂ, ಗೋವಾ ಸಿಎಂನ ಹೇಳಿಕೆ ಸರಿಯಾದುದಲ್ಲ. ಮಹದಾಯಿ ಯೋಜನೆಗೆ ಪರಿಸರ ಒಪ್ಪಿಗೆ ಸಿಗಬೇಕಾಗಿದೆಯೇ ಹೊರತು, ಉಚ್ಛನ್ಯಾಯಾಲಯದಲ್ಲಿಯೂ ಈ ವಿಚಾರ ಇತ್ಯರ್ಥವಾಗಿದೆ.
ನ್ಯಾ.ಕುನ್ಹಾ ಅವರ ವರದಿಯನುಸಾರ ಶಿಸ್ತಿನ ಕ್ರಮವನ್ನು ಜರುಗಿಸಿದೆ:
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದ ಪ್ರಕರಣದ ನ್ಯಾಯಮೂರ್ತಿ ಕುನ್ಹಾ ಅವರ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿ, ನ್ಯಾ.ಮೈಕಲ್ ಕುನ್ಹಾ ಅವರ ವರದಿಯನ್ನು ಸರ್ಕಾರ ಅಂಗೀಕರಿಸಿದೆ. ಕೆಎಸ್‌ಸಿಎ ಹಾಗೂ ಡಿಎನ್‌ಎ, ಆರ್.ಸಿ.ಬಿ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗಿದೆ. ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರು, ಎಸ್‌ಪಿ ಹಾಗೂ ಎಸಿಪಿ ಹಾಗು ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದೆ. ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ನ್ಯಾ.ಮೈಕಲ್ ಕುನ್ಹಾ ಅವರ ವರದಿಯನುಸಾರ ಸರ್ಕಾರವು ಶಿಸ್ತಿನ ಕ್ರಮವನ್ನು ಜರುಗಿಸಿದೆ ಎಂದರು.
ಆಗಸ್ಟ್‌ನಲ್ಲಿ ರಾಹುಲ್ ಗಾಂಧಿ ಜೊತೆ ಭೇಟಿ:
ಆಗಸ್ಟ್ 1 ಮತ್ತು 2ರಂದು ಎಐಸಿಸಿ ಕಾನೂನು ಕೋಶದ ವಿಚಾರ ಸಂಕಿರಣ ನಡೆಯಲಿದ್ದು, ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುತ್ತೇನೆ ಎಂದರು.