ಡಿಕೆಶಿ ಬೆಂಬಲಿಗರ ದೆಹಲಿ ಯಾತ್ರೆ ಒಗ್ಗಟ್ಟು ಮುರಿಯಲು ದಿಢೀರ್‌ ಕೃಷಿ ಸಚಿವರ ಸಭೆ ಕರೆದ ಸಿಎಂ

1 Min Read

ಬೆಂಗಳೂರು: ಗ್ಯಾರಂಟಿ ಸರ್ಕಾರಕ್ಕೆ (Congress Government) ಎರಡೂವರೆ ವರ್ಷ ಭರ್ತಿಯಾಗುತ್ತಿದ್ದಂತೆ ಅಧಿಕಾರ ಹಂಚಿಕೆಯ ರಣ ರೋಚಕ ಧಾರಾವಾಹಿ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಚಲುವರಾಯಸ್ವಾಮಿ (N Cheluvarayaswami) ದೆಹಲಿಗೆ ಹೋಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ದಾಳ ಪ್ರಯೋಗಿಸಿದ್ದು ನಾಳೆ ತುರ್ತು ಕೃಷಿ ಸಚಿವರ ಸಭೆಯನ್ನು ಕರೆದಿದ್ದಾರೆ.

ಹೌದು. ಡಿಕೆ ಶಿವಕುಮಾರ್‌ ಬೆಂಬಲಿಸುವ ಸಚಿವರು ಮತ್ತು ಶಾಸಕರು ಶಕ್ತಿ ಪ್ರದರ್ಶನ ಮಾಡಲು ಇಂದು ದಿಢೀರ್‌ ದೆಹಲಿಗೆ ಹಾರಿದ್ದಾರೆ. ಈ ಬಣದ ನಾಯಕತ್ವವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ದಿನವೇ ಕೊಟ್ಟ ಮಾತಿನ ಅಸ್ತ್ರ ಪ್ರಯೋಗಿಸಿದ ಸುರೇಶ್‌

ಚಲುವರಾಯಸ್ವಾಮಿ ದೆಹಲಿಗೆ ಹೋದ ಬೆನ್ನಲ್ಲೇ ಸಿಎಂ ಅಲರ್ಟ್‌ ಆಗಿದ್ದಾರೆ. ಇಂದು ರಾತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಸ್ತವ್ಯ ಹೂಡಬೇಕಿತ್ತು. ಆದರೆ ಸಿಎಂ ಮೈಸೂರು ವಾಸ್ತವ್ಯವನ್ನು ರದ್ದು ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 10:30ಕ್ಕೆ ಕಾವೇರಿ ನಿವಾಸದಲ್ಲಿ ಕೃಷಿ ಸಚಿವರ ಜೊತೆ ಮೆಕ್ಕೆಜೋಳ ಖರೀದಿಸುವ ಸಂಬಂಧ ತುರ್ತು ಸಭೆ ಕರೆದಿದ್ದು ಸೂಚನಾ ಪತ್ರ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು

ಹೆಸರಿಗೆ ಮೆಕ್ಕೆಜೋಳದ ಸಭೆಯನ್ನು ಕರೆದಿದ್ದರೂ ದೆಹಲಿ ಯಾತ್ರೆ ಒಗ್ಗಟ್ಟು ಮುರಿಯಲೆಂದೇ ಈ ಸಿದ್ದರಾಮಯ್ಯ ಈ ತಂತ್ರ ಹೂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ತುರ್ತು ಸಭೆ ನೆಪದಲ್ಲಿ ಚಲುವರಾಯಸ್ವಾಮಿ ಅವರನ್ನು ಸಮಾಧಾನ ಮಾಡಲು ಸಿದ್ದರಾಮಯ್ಯ ಕಸರತ್ತು ಆರಂಭಿಸಿದ್ದಾರೆ.

ಈಗಾಗಲೇ ಡಿಕೆಶಿ ಬಣದ ಬೆಂಬಲಿಗರ ನಾಯಕತ್ವ ಹೊತ್ತಿರುವ ಚಲುವರಾಯ ಸ್ವಾಮಿ ಸಿಎಂ ಮಾತಿಗೆ ಬೆಲೆ ನೀಡಿ ದೆಹಲಿಯಿಂದ ಮತ್ತೆ ಬೆಂಗಳೂರಿಗೆ ಮರಳುತ್ತಾರೋ? ಇಲ್ವೋ ಎನ್ನುವ ಕುತೂಹಲ ಹೆಚ್ಚಾಗಿದೆ.

Share This Article