ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ ದಾಖಲೆಯ 17ನೇ ಬಜೆಟ್ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಕೋನ, ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಅಸಮತೋಲನ ನಿವಾರಣೆಯ ಸಮಗ್ರ ದೃಷ್ಟಿಕೋನವನ್ನು ಪ್ರತಿಫಲಿಸುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಈ ಬಜೆಟ್ ಉಜ್ವಲ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರು ಬಜೆಟ್ ಗಾತ್ರವನ್ನು 4.48 ಲಕ್ಷ ಕೋಟಿ ರೂ.ಗೆ ಏರಿಸಿರುವುದು ರಚನಾತ್ಮಕ ಕ್ರಮವಾಗಿದೆ. ಇದಕ್ಕೆ ತಕ್ಕಂತೆ ಬಂಡವಾಳ ವೆಚ್ಚವನ್ನೂ ಅವರು ಘೋಷಿಸಿದ್ದಾರೆ. ಇವೆಲ್ಲವೂ ಅಭಿವೃದ್ಧಿ ಕಾರ್ಯಗಳಿಗೆ ವೇಗವನ್ನು ತಂದುಕೊಡಲಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: 4.48 ಲಕ್ಷ ಕೋಟಿ ಬಜೆಟ್‌ನಲ್ಲಿ ಗ್ಯಾರಂಟಿಗೆ ಹೋಗುತ್ತೆ 50,686 ಕೋಟಿ! ಯಾವ ಇಲಾಖೆಗೆ ಎಷ್ಟು?
ರೈತ ಕಲ್ಯಾಣ, ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಬಜೆಟ್ ಸಾಕಷ್ಟು ಆದ್ಯತೆ ನೀಡಿದೆ. ಇದು ಸುಸ್ಥಿರ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎಂದು ನುಡಿದಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಗತ್ಯವಾದ ಭೂಸ್ವಾಧೀನಕ್ಕೆ ಮುಖ್ಯಮಂತ್ರಿಗಳು ಪ್ರತಿ ಎಕರೆ ಕೃಷಿ ಜಮೀನಿಗೆ 30 ಲಕ್ಷ ರೂ. ಮತ್ತು ತರಿ ಜಮೀನಿಗೆ 40 ಲಕ್ಷ ರೂ. ನಿಗದಿಪಡಿಸಿರುವುದು ರೈತರಿಗೆ ಸಂದ ಜಯವಾಗಿದೆ. ಹಾಗೆಯೇ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯತ್ತ ಒಂದು ಹೆಜ್ಜೆ ಮುಂದಿಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಟಿಟಿಸಿ ಕೇಂದ್ರಗಳ ಮತ್ತು ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿದೆ. ಇದರಿಂದ ಗುಣಮಟ್ಟದ ಮಾನವ ಸಂಪನ್ಮೂಲ ಸೃಷ್ಟಿ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಜೆಟ್ 2026 – UNESCO ಸಹಮತಿಯೊಂದಿಗೆ ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ

