ನಾಟಿಕೋಳಿ ಮೆನು ಸವಿಯಲು ಡಿಕೆಶಿ ನಿವಾಸಕ್ಕೆ ಆಗಮಿಸಿದ ಸಿಎಂ

1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah)  ಉಪಹಾರ ಸವಿಯಲು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar)  ನಿವಾಸಕ್ಕೆ ಆಗಮಿಸಿದ್ದಾರೆ.

ಕಾವೇರಿ ನಿವಾಸದಿಂದ ಒಬ್ಬರೇ ಹೊರಟ ಸಿಎಂ ಬೆಳಗ್ಗೆ 9:40 ರ ವೇಳೆಗೆ ಡಿಕೆಶಿಯ ಸದಾಶಿವನಗರದಲ್ಲಿರುವ ನಿವಾಸಕ್ಕೆ ಆಗಮಿಸಿದರು. ಸಿಎಂ ಆಗಮಿಸಿದ ಕೂಡಲೇ ಡಿಕೆಶಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕುಣಿಗಲ್‌ ರಂಗನಾಥ್‌ ಅವರು ಸಿಎಂ ಕಾಲಿಗೆ ಅಡ್ಡ ಬಿದ್ದು ನಮಸ್ಕರಿಸಿದರು.

ಆರಂಭದಲ್ಲಿ ಸಿಎಂ ಜೊತೆ ಕೆಲ ಶಾಸಕರು ಡಿಕೆಶಿ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಆದರೆ ಸಿಎಂ ಜೊತೆ ಬೇರೆ ಶಾಸಕರು ಆಗಮಿಸಲಿಲ್ಲ. ಬ್ರೇಕ್‌ಫಾಸ್ಟ್‌ ಬಳಿಕ ಇಬ್ಬರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.

ಸಿಎಂ ಆಗಮನದ ಹಿನ್ನೆಲೆಯಲ್ಲಿ ಸದಾಶಿವನಗರದ ಡಿಕೆಶಿ ಅವರ ಮನೆ ಮುಂದಿನ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಿದ್ದಾರೆ.

ಕಳೆದ ಶನಿವಾರ ಸಿಎಂ ಕಾವೇರಿ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್‌ಫಾಸ್ಟ್ ಆಯೋಜನೆ ಮಾಡಲಾಗಿತ್ತು. ಅಂದೇ ಸಿಎಂಗೂ ತಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಡಿಕೆಶಿ ಆಹ್ವಾನಿಸಿದ್ದರು. ಹೀಗಾಗಿ  ಸಿಎಂಗೆ ಡಿಸಿಎಂ ಬ್ರೇಕ್‌ಫಾಸ್ಟ್ ಆತಿಥ್ಯ ಇರಲಿದ್ದು, ಸಹಜವಾಗಿ ರಾಜಕೀಯ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ‌ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ ನಾಟಿ ಕೋಳಿ ಸಾರು ಹಾಗೂ ನಾಟಿಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ‌ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ.

Share This Article