ಹಾಸನ: ಇಲ್ಲಿನ ಅರಸೀಕೆರೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ, ಶಿವಲಿಂಗೇಗೌಡರಿಗೆ (KM Shivalinge Gowda) ಕ್ಯಾಬಿನೆಟ್‌ನಲ್ಲಿ ಭವಿಷ್ಯ ಇದೆ, ರಾಜಕೀಯ ಭವಿಷ್ಯ ಇದೆ ಎಂದು ಹೇಳುತ್ತಿದ್ದರು. ಈ ವೇಳೆ ಬೆಂಬಲಿಗರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ಕೊಡಿ ಎಂದು ಒತ್ತಾಯಿಸಿದರು. ಸಿಎಂ ಮಾತನ್ನೂ ಕೇಳದೇ ಸಚಿವ ಸ್ಥಾನ ನೀಡುವಂತೆ ಘೋಷಣೆ ಕೂಗುತ್ತಲೇ ಇದ್ದರು. ಇದರಿಂದ ಸಿಟ್ಟಾದ ಸಿಎಂ, ಭಾಷಣ ನಿಲ್ಲಿಸಿ ಹೊರಡಲು ಮುಂದಾದರು. ವೇದಿಕೆ ಮೇಲಿದ್ದ ಶಾಸಕ ಕೆ.ಎಂ ಶಿವಲಿಂಗೇಗೌಡರ ವಿರುದ್ಧವೂ ಅಸಮಾಧಾನಗೊಂಡರು. ಮಂತ್ರಿ ಮಾಡೋದು ಸರ್ಕಾರ, ಬಹಿರಂಗವಾಗಿ ಹೇಳಲು ಆಗಲ್ಲ. ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲು ಆಗಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಸಿದ್ದರಾಮಯ್ಯ 10 ವರ್ಷ ಸಿಎಂ ಆಗ್ಬಿಟ್ರೆ ತಾಯಿ ಚಾಮುಂಡಿಗಿಂತ ದೊಡ್ಡವರಾಗಿಬಿಡ್ತಾರೆ: ಪ್ರತಾಪ್ ಸಿಂಹ ಕಿಡಿ
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೆ.ಎನ್ ರಾಜಣ್ಣ ಹಾಗೂ ಶಾಸಕ ಶಿವಲಿಂಗೇಗೌಡ ಬೆಂಬಲಿಗರ ಮೇಲೆ ಗರಂ ಆದರು. ಮುಖ್ಯಮಂತ್ರಿಗಳನ್ನ ಸಮಾಧಾನಪಡಿಸಿದ್ರು. ಬಳಿಕ ಸಿಎಂ ಭಾಷಣ ಮುಂದುವರಿಸಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆ.ಎನ್ ರಾಜಣ್ಣ, ಭೈರತಿ ಸುರೇಶ್, ಜಮೀರ್ ಅಹಮದ್, ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಮೈಸೂರಿಗೆ ನಾಲ್ವಡಿಗಿಂತಲೂ ಸಿದ್ದರಾಮಯ್ಯ ಕೊಡುಗೆ ಜಾಸ್ತಿ: ಯತೀಂದ್ರ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ