-ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಬೆಂಗಳೂರು/ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ನೀಡಿರುವ ಹಳೆಯ ಹೇಳಿಕೆಯೊಂದು ಬಿರುಗಾಳಿ ಎಬ್ಬಿಸಿದೆ. ಸಿದ್ದರಾಮಯ್ಯ ವಿರುದ್ಧ 24 ಕೊಲೆಗಳ ಆರೋಪ ಮಾಡಿದ್ದ ಹೇಳಿಕೆಯೊಂದು ವೈರಲ್ ಆಗಿದ್ದು, ಗೃಹ ಸಚಿವ ಪರಮೇಶ್ವರ್ ಅವರು ತಿಮರೋಡಿಯನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ನಾಯಕರು ತಿಮರೋಡಿ ಹೇಳಿಕೆಯನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿಗಳು ಮೌನ ವಹಿಸಿರುವುದನ್ನು ಪ್ರಶ್ನಿಸಿದರು. ತಿಮರೋಡಿ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಗಮನ ಸೆಳೆದು, ಇದಕ್ಕೆ ಸರ್ಕಾರ ಸ್ಪಷ್ಟನೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ರೈಲು ಪ್ರಯಾಣಿಕರ ಗಮನಕ್ಕೆ; ಆ.24ರಂದು ಈ ರೈಲುಗಳ ಸಂಚಾರ ರದ್ದು
ಸಿದ್ದರಾಮಯ್ಯ ಅವರ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಕೊಟ್ಟ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಪರಮೇಶ್ವರ್ ಅವರು ಸದನದಿಂದ ಹೊರಗಡೆ ಬಂದು ಮಂಗಳೂರು ಪೊಲೀಸರಿಗೆ ಕರೆ ಮಾಡಿ ತಿಮರೋಡಿಯನ್ನು ಅರೆಸ್ಟ್ ಮಾಡುವಂತೆ ಸೂಚಿಸಿದ್ದಾರೆ.
ಸಿಎಂ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ ಆರೋಪದ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯರ ಗಮನಕ್ಕೆ ತಂದಿದ್ದಾರೆ. ಪರಮೇಶ್ವರ್ ಜೊತೆ ಮಾತುಕತೆ ವೇಳೆ ಡಿಕೆಶಿ ಸಿಎಂ ಗಮನಕ್ಕೆ ತಂದಿದ್ದಾರೆ. ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ ತಕ್ಷಣವೇ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇನ್ನೂ ಸಿಎಂ ಸೂಚನೆಯಂತೆ, ಕೇಸ್ ದಾಖಲಿಸಲು ಪರಮೇಶ್ವರ್ ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಿಸಿದ್ದು, ಯಾವುದೇ ಕ್ಷಣದಲ್ಲೂ ತಿಮರೋಡಿಯ ಬಂಧನವಾಗುವ ಸಾಧ್ಯತೆ ಇದೆ.
ಒಟ್ಟಾರೆ ಧರ್ಮಸ್ಥಳ ಫೈಲ್ಸ್ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರವನ್ನೇ ಮಹೇಶ್ ಶೆಟ್ಟಿ ತಿಮರೋಡಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ತಿಮರೋಡಿ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಆತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾ ಕಾದುನೋಡಬೇಕಿದೆ.ಇದನ್ನೂ ಓದಿ: ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ