ಸಾಲಮನ್ನಾಕ್ಕೆ ಹಣದ ಕೊರತೆಯೇ ಇಲ್ಲ, ಅಧಿಕಾರಿಗಳು ನನ್ನ ವೇಗಕ್ಕಿಲ್ಲ: ಸಿಎಂ

Public TV
2 Min Read

ರಾಯಚೂರು: ರೈತರ ಸಾಲಮನ್ನಾ ಮಾಡಿದ್ದರಿಂದ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ನನ್ನ ವೇಗಕ್ಕೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಗ್ರಾಮವಾಸ್ತವ್ಯ ಮಾಡಲಿರುವ ಕರೇಗುಡ್ಡಕ್ಕೆ ತೆರಳುವ ಮೊದಲು ರಾಯಚೂರಿನ ಸರ್ಕಿಟ್ ಹೌಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ 3 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದೇವೆ. ಜಿಲ್ಲೆಯ ಬಸ್ಸಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು 15 ದಿನದ ಒಳಗೆ ಸರಿ ಪಡಿಸುತ್ತೇನೆ. ರೈತರ ಸಾಲ ಮನ್ನಾಕ್ಕೆ ಹಣದ ಕೊರತೆ ಇಲ್ಲ. ಆದರೆ ನನ್ನ ಸ್ಪೀಡಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಸಿಇಓ ಜೊತೆ ಚರ್ಚೆ ಮಾಡಿ ಇಲ್ಲಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾಯಚೂರು ಜಿಲ್ಲೆಗೆ ಆಗಬೇಕಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಿದ್ದಾರೆ. ಕೇವಲ ಗ್ರಾಮ ವಾಸ್ತವ್ಯಕ್ಕಾಗಿ ಬಂದಿಲ್ಲ. ಜಿಲ್ಲೆಯ ಸಮಗ್ರ ಯೋಜನೆ ಬಗ್ಗೆ ಕಾರ್ಯಕ್ರಮ ರೂಪಿಸಲು ಬಂದಿದ್ದೇನೆ. ವೈದ್ಯಕೀಯ ವಿವಿ ನೀಡುವ ಸಂಬಂಧ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದರು.

ಕೃಷ್ಣ ಭಾಗ್ಯ ಜಲನಿಗಮದ ಯೋಜನೆಗೆ ಸಾಕಷ್ಟು ಹಣ ನೀಡಿದ್ದೇವೆ. ಸಾರಿಗೆ ನಿಗಮದ ನಷ್ಟದ ಬಗ್ಗೆಯೂ ಚರ್ಚೆ ನಡೆಸಿದ್ದು ಅದಕ್ಕೆ ಮತ್ತೆ ಪುನಶ್ಚೇತನಗೊಳಿಸಲು ನಿರ್ಧರಿಸಿದ್ದೇವೆ. ಬಿಎಂಟಿಸಿಯನ್ನು ಲಾಭದಾಯಕ ಮಾಡಬೇಕಿದೆ. ವೊಲ್ವೋ ನಗರ ಸಾರಿಗೆ ಲಾಭದಾಯಕವಾಗಿಲ್ಲ. 200 ಕಿ.ಮೀ ಒಳಗೆ ಸಂಚರಿಸುವ ವೋಲ್ವೋದಿಂದ ನಷ್ಟವಾಗುತ್ತಿದೆ ಎಂದು ತಿಳಿಸಿದರು.

ದೇವದುರ್ಗ ಬಿಜೆಪಿ ಶಾಸಕರು ಪಾದಯಾತ್ರೆ ಮಾಡುತ್ತಿದ್ದು ಇದಕ್ಕೆಲ್ಲ ನಾನು ಹೆದರಲ್ಲ. ಅಣ್ತಮ್ಮ ಎಂದು ಮನವಿ ಕೊಟ್ಟಿದ್ದಾರೆ. ನನಗೆ 6 ಕೋಟಿ ಜನರು ಅಣ್ಣ-ತಮ್ಮರೆ ಆಗಿದ್ದಾರೆ. ನನಗೆ ನನ್ನ ಒಡ ಹುಟ್ಟಿದವರು ಮಾತ್ರ ಅಣ್ತಮ್ಮ ಅಲ್ಲ. ಈ ಶಾಸಕ ಯುದ್ಧಕ್ಕೆ ಬರ್ತಾರಾ ಎಂದು ಪ್ರಶ್ನಿಸಿದ ಸಿಎಂ, ನಮ್ಮ ಕುಟುಂಬ ಸೋಲು-ಗೆಲುವು ಎರಡನ್ನೂ ನೋಡಿದೆ. ದೇವೇಗೌಡರು ನೀರಿನ ಯೋಜನೆ ಮಾಡುವಾಗ ಇವರು ಹುಟ್ಟಿದ್ದರೋ ಇಲ್ವೋ ಗೊತ್ತಿಲ್ಲ. ದೇವದುರ್ಗ ಐಬಿಗೆ ಯಡಿಯೂರಪ್ಪನ ಕರೆತಂದು ಡ್ರಾಮ ಮಾಡಿದ್ರಲ್ಲ ಎಲ್ಲಾ ಗೊತ್ತಿದೆ. ಯಡಿಯೂರಪ್ಪನ ಬೈದರು, ನನ್ನನ್ನು ಹೊಗಳಿದ್ರು ಎಲ್ಲಾ ಗೊತ್ತಿದೆ ಎಂದರು.

ಯಡಿಯೂರಪ್ಪನನ್ನ ಖೆಡ್ಡಾಕ್ಕೆ ಕೆಡವಿದರು. ಜಿಲ್ಲೆಯಲ್ಲಿ ಹಲವಾರು ಇಲಾಖೆಯಲ್ಲಿ 61 ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಮೈತ್ರಿ ಸರ್ಕಾರ ತೆಗೆದುಕೊಂಡ ನಿರ್ಣಯ, ಯೋಜನೆ ಜನರಿಗೆ ಗೊತ್ತಾಗಲು ಐದಾರು ತಿಂಗಳು ಬೇಕಾಗಿದೆ. ಶಿಕಾರಿಪುರಕ್ಕೆ ನೀರಾವರಿಗಾಗಿ 500 ಕೋಟಿ ಕೊಟ್ಟಿದ್ದೇನೆ. ಇವರು ಮಂಡ್ಯ, ರಾಮನಗರದ ಬಗ್ಗೆ ಚರ್ಚೆ ಮಾಡಲಿ. ಹೃದಯ ವೈಶಾಲ್ಯತೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

ಗ್ರಾಮವಾಸ್ತವ್ಯಕ್ಕೆ ಸ್ಕೂಲ್ ನಲ್ಲಿ ಶೌಚಾಲಯ ಕಟ್ಟಿದ್ದಾರೆ. ಇದು ಮಕ್ಕಳಿಗೆ ಅನುಕೂಲ ಆಗುತ್ತದೆ. ನನಗಾಗಿ ಮಲಗಲು ಮಂಚವೂ ಬೇಡ ಎಂದಿದ್ದೇನೆ. ವಾಸ್ತವ್ಯಕ್ಕೆ ಒಂದು ಚಾಪೆ-ದಿಂಬು ಸಾಕು ಎಂದಿದ್ದೇನೆ. ಇಲಾಖೆ ಕಾರ್ಯಕ್ರಮಕ್ಕೆ ಇಲಾಖೆಯಿಂದ ಹಣ ಖರ್ಚು ಮಾಡುತ್ತಾರೆ. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದರು.

ಇದೇ ವೇಳೆ ಸಿಎಂಗೆ ಸಚಿವರಾದ ಸಾ.ರಾ ಮಹೇಶ್, ವೆಂಕಟರಾವ್ ನಾಡಗೌಡ ಮತ್ತು ಮಾಜಿ ಶಾಸಕ ಕೋನರೆಡ್ಡಿ ಸಾಥ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *