ಹಣಕಾಸು ಮಸೂದೆ ಮಂಡಿಸಲು ಸಿಎಂ ಪ್ಲಾನ್ – ಇತ್ತ ಠಕ್ಕರ್ ಕೊಡಲು ಬಿಜೆಪಿ ಮಾಸ್ಟರ್ ಪ್ಲಾನ್

Public TV
2 Min Read

ಬೆಂಗಳೂರು: ಇಂದಿನಿಂದ ಶುರುವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಗೆ ಠಕ್ಕರ್ ಕೊಡಲು ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇತ್ತ ಬಿಜೆಪಿಯವರೂ ಸಿಎಂಗೆ ಠಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಅಧಿವೇಶನದ ಮೊದಲ ದಿನವೇ ಸಿಎಂ, ಬಿಜೆಪಿಯವರು ನಿರೀಕ್ಷೆ ಮಾಡಿರದಂತಹ ಪೆಟ್ಟು ಕೊಡಲು ಸಿದ್ಧರಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಬಹುಮತ ಇಲ್ಲ ಅಂತಿರುವ ಬಿಜೆಪಿಗೆ ಸಿಎಂ ಖಡಕ್ ಉತ್ತರ ಕೊಡಲಿದ್ದಾರೆ. ಸದನದಲ್ಲಿ ಮೊದಲ ದಿನವೇ ಹಣಕಾಸು ಮಸೂದೆಯನ್ನು ಮಂಡಿಸಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಸರ್ಕಾರ ಭೌತಿಕವಾಗಿ ಅಲ್ಪಮತಕ್ಕೆ ಕುಸಿದರೂ ವಿಧಾನಮಂಡಲ ಅಧಿವೇಶನದಲ್ಲಿ ಹಣಕಾಸು ಬಿಲ್ ಮಂಡನೆ ಸಾಧ್ಯತೆ ಇದೆ. ಹಣಕಾಸು ವಿಧೇಯಕ ಮಂಡನೆ ಮಾಡುವ ಮೂಲಕ ಸಿಎಂ ಬಿಜೆಪಿ ಊಹಿಸಿರದ ಶಾಕ್ ಕೊಡುವ ಸಾಧ್ಯತೆ ಇದೆ. ಜೊತೆಗೆ ಈ ಮೂಲಕ ಸಿಎಂ ಸದನದಲ್ಲಿ ಹೊಸದೊಂದು ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಬಿಜೆಪಿ ಮಾಸ್ಟರ್ ಪ್ಲಾನ್:
ವಿಧಾನಮಂಡಲ ಅಧಿವೇಶನದಲ್ಲಿ ಬಿಜೆಪಿಗೆ ಠಕ್ಕರ್ ಕೊಡಲು ಸಿಎಂ ಹಣಕಾಸು ಮಸೂದೆಯನ್ನು ಮಂಡನೆ ಮಾಡುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇತ್ತ ಸಿಎಂ ಹಣಕಾಸು ಠಕ್ಕರ್  ಬಿಜೆಪಿ ತಿರುಗೇಟು ಕೊಡಲು ಪ್ಲಾನ್ಸ್ ಮಾಡಿಕೊಂಡಿದ್ದು, ಅಧಿವೇಶನಕ್ಕೆ ತಯಾರಾಗದೇ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

ಇಂದು ಬಿಜೆಪಿ ಜಾಣ ನಡೆಯನ್ನು ಅನುಸರಿಸಲಿದೆ. ದೋಸ್ತಿ ಸರ್ಕಾರ ಅಸ್ಥಿರಗೊಳ್ಳುತ್ತಿದ್ದಂತೆ ಬಿಜೆಪಿ ನಾಯಕರು ಅಲರ್ಟ್ ಆಗಿದ್ದು, ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅಧಿವೇಶನ ನಡೆಯಲ್ಲ ಎಂದೇ ಬಿಜೆಪಿ ನಂಬಿದೆ. ಹಾಗಾಗಿ ಅಧಿವೇಶನದಲ್ಲಿ ಚರ್ಚೆ, ಹೋರಾಟ ಮಾಡಬೇಕಾದ ವಿಷಯಗಳ ಬಗ್ಗೆ ತಯಾರಾಗಿಲ್ಲ. ಜೊತೆಗೆ ಬಿಜೆಪಿ ಇಂದಿನ ಸುಪ್ರೀಂಕೋರ್ಟ್ ತೀರ್ಪನ್ನು ಎದುರು ನೋಡುತ್ತಿದೆ.

ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದು, ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಹೀಗಾಗಿ ಸುಪ್ರೀಂ ನಿರ್ದೇಶನದಂತೆ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಇಂದು ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಸ್ಪೀಕರ್ ಅತೃಪ್ತ ಶಾಸಕರ ರಾಜೀನಾಮೆಗಳನ್ನು ಅಂಗೀಕರಿಸುತ್ತಾರೆ ಎಂದು ಬಿಜೆಪಿ ಕಾಯುತ್ತಿದೆ. ಕಾನೂನು ಹೋರಾಟದಲ್ಲಿ ಹಿನ್ನಡೆಯಾಗದಂತೆಯೂ ಬಿಜೆಪಿ ತಂತ್ರ ರೂಪಿಸಿದೆ. ಜುಲೈ 6 ರಂದು ಮೊದಲ ಬಾರಿ ರಾಜೀನಾಮೆ ನೀಡಿದ್ದೇವೆ. ಮತ್ತೆ ಗುರುವಾರವೂ ರಾಜೀನಾಮೆ ಕೊಟ್ಟಿದ್ದೇವೆ ಎಂದು ಅತೃಪ್ತರ ಕಡೆಯಿಂದ ಬಿಜೆಪಿ ಬರೆಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಸ್ಪೀಕರ್ ಇನ್ನಷ್ಟು ವಿಳಂಬ ಮಾಡಬಾರದೆಂದು ಬಿಜೆಪಿ ಜಾಣ ನಡೆಯನ್ನು ಅನುಸರಿಸಿದ್ದು, ದೋಸ್ತಿ ಸರ್ಕಾರ ಬಿದ್ದು ಹೋದರೆ ಸರ್ಕಾರ ರಚಿಸಲು ತಯಾರಿಯಲ್ಲಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *