ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್‍ವೈ

Public TV
1 Min Read

– ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್

ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಿಎಂ ಆಗಿ ಆಯ್ಕೆಯಾದ ಬಳಿಕ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ್ರು.

ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ವಾಸ್ತು ಪ್ರಕಾರ ಕೊಠಡಿಯನ್ನು ಬದಲಾವಣೆ ಮಾಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್ ಮಾಡಿಸಿದ್ದಾರೆ. ದ್ವಾರವನ್ನು ಮುಚ್ಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಪೂರ್ವಾಭಿಮುಖವಾಗಿ ಆಸೀನರಾಗಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ವಿಧಾನಸೌಧದಲ್ಲಿ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿತ್ತು. ವಿಧಾನಸೌಧದ ಮೂರನೇ ಕೊಠಡಿಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿದ್ದರಾಮಯ್ಯ ನಾಮಫಲಕವನ್ನು ತೆಗೆದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಫಲಕವನ್ನ ವಿಧಾನಸೌಧದ ಸಿಬ್ಬಂದಿ ಹಾಕಿದ್ದಾರೆ.

ಕೊಠಡಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾಡಿನ ರೈತ ಸಮೂಹಕ್ಕೊಂದು ಭರವಸೆ ನೀಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಹಾಗೆಯೇ ಸಹಕಾರಿ ಸಂಘದ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಅವರು ಅಂಕಿ-ಅಂಶಗಳನ್ನು ನೋಡಿ ಸಂಜೆಯೊಳಗೆ ಅಥವಾ ನಾಳೆ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.

ಜನರ ಬೆಂಬಲ ನನ್ನಪರ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣಾ ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಜನರ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ಈ ವಿಚಾರದಲ್ಲಿ ನಾನು ನೂರಕ್ಕೆ ನೂರು ಯಶಸ್ಸನ್ನು ಕಾಣುತ್ತೇನೆಂಬ ವಿಶ್ವಾಸ ನನಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *