ಧರಂ ಸಿಂಗ್ ಸಾವಿಗೆ ನಾನು ಕಾರಣ ಅಲ್ಲ: ಸಿಎಂ

Public TV
1 Min Read

ಬೆಂಗಳೂರು: ವಿಶ್ವಾಸಮತಯಾಚನೆಯನ್ನು ಸದನದಲ್ಲಿ ಮಂಡನೆ ಮಾಡಿ ಚರ್ಚೆ ಆರಂಭಿಸಿರುವ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಈ ಹಿಂದಿನ ರಾಜಕೀಯ ನಡೆಗಳ ಬಗ್ಗೆಯೂ ಮಾತನಾಡಿದ್ದು, ತಾವು ಮಾಜಿ ಸಿಎಂ ಧರಂ ಸಿಂಗ್ ಅವರ ಸಾವಿಗೆ ಕಾರಣವಲ್ಲ ಎಂದು ಹೇಳಿದ್ದಾರೆ.

ಸದನದಲ್ಲಿ ಮಾತನಾಡಿದ ಸಿಎಂ ಅವರು, ನಾನು ನನ್ನ ಜೀವನದಲ್ಲಿ ನಮ್ಮ ತಂದೆ ದೇವೇಗೌಡರ ಅಭಿಪ್ರಾಯದ ವಿರುದ್ಧವಾಗಿ ಮೊದಲ ಬಾರಿಗೆ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಿ ತಪ್ಪು ಮಾಡಿದ್ದೆ ಎಂದರು. ಇದೇ ವೇಳೆ ಧರಂ ಸಿಂಗ್ ಅವರ ಸಾವಿಗೆ ನಾನು ಕಾರಣವಲ್ಲ ಎಂದರು.

ಧರಂ ಸಿಂಗ್ ಹಾಗೂ ನಾನು 5 ವರ್ಷ ಪಾರ್ಲಿಮೆಂಟಿನಲ್ಲಿ ಪಕ್ಕದಲ್ಲಿ ಕುಳಿತು ಅವರೊಂದಿಗೆ ಇದ್ದೆ. ಅವರು ನನ್ನ ತಂದೆಗೆ ಸಾಮಾನರಾಗಿದ್ದರು. ಅಂದು ಸಿಎಂ ಸ್ಥಾನಕ್ಕಾಗಿ ಅಧಿಕಾರ ಹಿಡಿಯಲಿಲ್ಲ. ಆ ಕನಸು ನನಗೆ ಇರಲಿಲ್ಲ, ನಾವು ದೇವರ ಮೇಲೆ ಭಯ ಇಟ್ಟು ಬಂದಿದ್ದೇನೆ. ಎಲ್ಲಾ ವಿಧಿಯಂತೆ ನಡೆದಿದೆಯಷ್ಟೇ ಎಂದರು.

ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಆದರೆ ಪಕ್ಷದ, ಶಾಸಕರಿಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದೇನೆ ಎಂದರು. ಇದೇ ವೇಳೆ ನಾವು ಮಾಟಮಂತ್ರ ಮಾಡಿಸುವ ಕುಟುಂಬ ಅಲ್ಲ ಎಂದು ತಿರುಗೇಟು ನೀಡಿದ ಸಿಎಂ, ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಅರ್ಚಕರು ನೀಡಿರುವ ಏಲಕ್ಕಿ ಹಾರ, ನಿಂಬೆ ಹಣ್ಣು ತರುವುದು ತಪ್ಪೇ ಎಂದು ಪ್ರಶ್ನೆ ಮಾಡಿದರು.

ಎಷ್ಟು ದಿನ ಇರುತ್ತೀರಿ ನೋಡುತ್ತೇನೆ: ಹೊಸದಾಗಿ ಮಾಡಲು ನೀವು ಮಾಡಿರುವ ಸಾಹಸದಿಂದ ಎಷ್ಟು ದಿನ ಸುಭದ್ರ ಸರ್ಕಾರ ನೀಡುತ್ತೀರಿ ಎಂಬುವುದನ್ನ ನಾನು ಕುಳಿತು ನೋಡುತ್ತೇನೆ. ಸರ್ಕಾರ ರಚನೆ ಆಗಿದ್ದ ಕ್ಷಣದಿಂದ ಏನೆಲ್ಲಾ ಮಾಡಿದ್ದೀರಿ ಎಂಬುವುದು ನನಗೆ ತಿಳಿದಿದೆ. ಅಲ್ಲದೇ ಇಂದು ನಡೆಯುತ್ತಿರುವ ಎಲ್ಲಾ ರಾಜಕೀಯ ನಡೆಗಳ ಬಗ್ಗೆಯೂ ಸಾಕಷ್ಟು ಫೋಟೋಗಳಿವೆ. ಆದರೆ ನೀವು ತಾತ್ಕಾಲಿಕವಾಗಿ ಸಂತಸ ಪಡೆಯುತ್ತಿದ್ದು, ಮುಂದೇ ನಿಮಗೂ ಕಾದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *