ಇಂದು ರಾಹುಲ್ ಗಾಂಧಿ ಭೇಟಿಯಾಗಲಿರುವ ಸಿಎಂ ಕುಮಾರಸ್ವಾಮಿ

Public TV
2 Min Read

ಬೆಂಗಳೂರು: ಮೈತ್ರಿ ಸರ್ಕಾರ ಇಂದಿಗೆ ನೂರು ದಿನ ಪೂರೈಸಿದೆ. ಅಧಿಕಾರ ನಡೆಸಿದ ನೂರು ದಿನಗಳಲ್ಲಿ ಸಾವಿರ ಸಮಸ್ಯೆಗಳನ್ನು ಎದುರಿಸಿದೆ. ಮೈತ್ರಿ ಪಕ್ಷದ ನಾಯಕರಲ್ಲಿ ಹೊಂದಾಣಿಕೆ ಇಲ್ಲ ಎಂಬುದನ್ನು ನಾಯಕರ ಹೇಳಿಕೆಗಳೇ ಸಾರಿ ಹೇಳುತ್ತಿವೆ. ಈ ಬೆಳವಣಿಗೆಗಳ ನಡುವೆ ಇಂದು ದೆಹಲಿಯಲ್ಲಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ನೂರು ದಿನದ ಸಂಭ್ರಮ ಹಂಚಿಕೊಳ್ಳುವುದರ ಜತೆ ಕಾಂಗ್ರೆಸ್ ನಾಯಕರ ವಿರುದ್ಧ ನೂರು ದೂರುಗಳನ್ನು ನೀಡಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಬುಧವಾರ ರಾತ್ರಿಯೇ ದೆಹಲಿಗೆ ಬಂದು ಬೀಡು ಬಿಟ್ಟಿರುವ ಕುಮಾರಸ್ವಾಮಿ ಬೆಳಗ್ಗೆ 9.30ಕ್ಕೆ ರಾಹುಲ್ ಗಾಂಧಿ ಭೇಟಿಯಾಗಲಿದ್ದಾರೆ. ಮೈತ್ರಿ ಸರ್ಕಾರ ನೂರು ದಿನಗಳನ್ನು ಪೂರೈಸಿರುವ ಬಗ್ಗೆ ರಾಹುಲ್ ಗಾಂಧಿ ಬಳಿ ಚರ್ಚಿಸಲಿರುವ ಕುಮಾರಸ್ವಾಮಿ ಮುಂದೆ ಸಾಗಬೇಕಾದ ದಿಕ್ಕಿನ ಬಗ್ಗೆ ರಾಹುಲ್ ಗಾಂಧಿ ಬಳಿ ಸಲಹೆ ಪಡೆಯಲಿದ್ದಾರೆ.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎರಡು ಪಕ್ಷಗಳ ಕಾರ್ಯಕರ್ತರು ಸುಮ್ಮನಿದ್ರೂ, ನಾಯಕರುಗಳು ಮಾತ್ರ ಸುಮ್ಮನಿರುತ್ತಿಲ್ಲ. ದಿನಕ್ಕೊಂದು ಹೇಳಿಕೆ ಕೊಟ್ಟು ಮೈತ್ರಿ ಸರಕಾರದ ಭವಿಷ್ಯವನ್ನು ತೂಕಕ್ಕಿಡುತ್ತಿದ್ದಾರೆ. ಇಂತಹ ಹೇಳಿಕೆಗಳು ಸಿಎಂ ಕುಮಾರಸ್ವಾಮಿಗೆ ಬೇಸರ ತರಿಸಿದೆ. ಅಲ್ಲದೆ ಸಿದ್ದರಾಮಯ್ಯರ ನಾನೇ ಸಿಎಂ ಆಗ್ತಿನಿ ಅನ್ನೊ ಹೇಳಿಕೆ ಕೂಡ ಮುಜುಗರಕ್ಕಿಡುಮಾಡಿದೆ. ಈ ಎಲ್ಲ ವಿಷಯಗಳನ್ನು ರಾಹುಲ್ ಗಾಂಧಿ ಬಳಿ ಸಿಎಂ ಪ್ರಸ್ತಾಪಿಸಲಿದ್ದಾರೆ ಎನ್ನಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬಳಿಕ ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನ ಭೇಟಿ ಮಾಡಿ, ತಾವು ಇತ್ತೀಚಿಗೆ ಕ್ಯಾಬಿನೇಟ್ ನಲ್ಲಿ ಚರ್ಚಿಸಿದಂತೆ ರೈತರ ಸಾಲಮನ್ನಾ ವಿಚಾರದಲ್ಲಿ ಋಣಮುಕ್ತ ಅಧಿನಿಯಮದ ಸುಘ್ರೀವಾಜ್ಞೆಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಋಣಮುಕ್ತ ಅಧಿನಿಯಮ ಅಂಗೀಕಾರವಾಗಬೇಕಾದ್ರೆ ರಾಷ್ಟ್ರಪತಿ ಅಂಕಿತ ಬೇಕಿದೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತರುವುದರಿಂದ ಯಾವೆಲ್ಲ ರೀತಿಯಲ್ಲಿ ರಾಜ್ಯದ ರೈತರಿಗೆ ಸಹಕಾರಿಯಾಗಲಿದೆ ಅನ್ನೋ ಬಗ್ಗೆ ತಿಳಿಸಲಿದ್ದಾರೆ. ನಂತರ ತಾವು ತರಲು ನಿರ್ಧರಿಸೋ ಸುರ್ಗೀವಾಜ್ಞೆಯ ಬಗ್ಗೆ ಮನವಿ ಮಾಡಲಿದ್ದಾರೆ.

ರಾಜ್ಯದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾದ ಹಾನಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಳಿ ಚರ್ಚಿಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರೋ ಸಿಎಂ ಹಾನಿಯ ಬಗ್ಗೆ ಮಾಹಿತಿಯನ್ನ ಕಲೆಹಾಕಿದ್ದಾರೆ. ಸರ್ಕಾರ ಸಿದ್ದಪಡಿಸಿರೋ ಹಾನಿಯ ಮಾಹಿತಿಯನ್ನ ಸಿಎಂ ಗೃಹ ಸಚಿವರಿಗೆ ತಿಳಿಸಲಿದ್ದಾರೆ. ಈಗಾಗಲೇ ಸಿಎಂ ಹೇಳಿರುವಂತೆ ಮೂರು ಸಾವಿರ ಕೋಟಿ ಕೊಡಗಿನಲ್ಲಿ ಹಾನಿಯಾಗಿದ್ದು, ಕೇಂದ್ರದಿಂದ ಎನ್ ಡಿ ಆರ್ ಎಫ್ ನಿಧಿಯಿಂದ ಎರಡು ಸಾವಿರ ಕೋಟಿ ಅನುದಾನ ಕೇಳಲು ತೀರ್ಮಾನಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *